January 14, 2025

ಚಡಚಣ: ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ ಕವಿ ದಿ.ಕುರಾಡಿ ಸೀತಾರಾಮ ಅಡಿಗರ ನೆನಪಿನ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಸಂಸ್ಥೆಯು ಕೊಡಮಾಡುವ 2023ನೇ ಸಾಲಿನ “ಕುರಾಡಿ ಸೀತಾರಾಮ ಅಡಿಗ ಕಾವ್ಯ ಪುರಸ್ಕಾರ” ಕ್ಕೆ ಹಲಸಂಗಿಯ ಕವಿ ಸುಮಿತ್ ಮೇತ್ರಿ ಆಯ್ಕೆಯಾಗಿದ್ದಾರೆ.

“ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ” (2019), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆಯ “ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ-ಹಲಸಂಗಿ”
(2022), “ಈ ಕಣ್ಣುಗಳಿಗೆ ಸದಾ ನೀರಡಿಕೆ”(2023) ಪ್ರಕಟಿತ ಕೃತಿಗಳು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೆ ಬರೆದ “ಅರಗಿನ ಅರಮನೆ” (2017) ಅಪ್ರಕಟಿತ ನಾಟಕ.

2019ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಯುವಕವಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ.ಅನಂತಸ್ವಾಮಿ ದತ್ತಿ, ಸಾಹಿತ್ಯ ಸಂಗಮ ಕೊಡಮಾಡುವ ಹರಿಹರಶ್ರೀ ಪ್ರಶಸ್ತಿ, ಸಾಹಿತ್ಯ ಚಿಗುರು, ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು ಎರಡು ಬಾರಿ “ಸಮೀರವಾಡಿ ಕಾವ್ಯ” ಪುರಸ್ಕಾರ (2019-2023) ಸೇರಿದಂತೆ ಹಲವು ಪುಸ್ತಕ ಬಹುಮಾನ ಹಾಗೂ ಜನಮಿತ್ರ, ಜನಶಕ್ತಿ ಹೀಗೆ ಹಲವು ಕಾವ್ಯಸ್ಪರ್ಧೆಗಳಿಂದ ಪುರಸ್ಕಾತರಾಗಿರುವ ಇವರ ಕವಿತೆಗಳು ಇಂಗ್ಲಿಷ್ ಒಳಗೊಂಡಂತೆ ಭಾರತದ ಇತರ ಭಾಷೆಗಳಿಗೂ ಅನುವಾದಗೊಂಡಿವೆ. ಹೊಸ ಕನ್ನಡ ಕಾವ್ಯದ ಅತ್ಯಾಕರ್ಷಕ ಧ್ವನಿಗಳಲ್ಲಿ ಒಬ್ಬರಾಗಿ, ಧಗಧಗಿಸುವ ನಿಶ್ಯಬ್ದದೊಂದಿಗೆ ಆತ್ಮವಿಶ್ವಾಸ, ನಿರ್ಭೀತವಾಗಿ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಇರುವ ಇವರ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆದಿವೆ. ಈಗ ಇವರ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕವನ ಸಂಕಲನಕ್ಕೆ “ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ”ದೊರೆತಿದೆ.