December 24, 2024

ಬೆಂಗಳೂರು: ಕನ್ನಡ ಭಾಷೆಯ ಅಭಿವೃದ್ಧಿಗೆ ಬಿಬಿಎಂಪಿಯು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಬಿಬಿಎಂಪಿಯ ಮುಖ್ಯ ಆಡಳಿತಗಾರರಾದ ಎಸ್.ಆರ್.ಉಮಾಶಂಕರ್ ಹೇಳಿದರು. ಬಿಬಿಎಂಪಿಯ ಕೇಂದ್ರ ಕಛೇರಿಯಲ್ಲಿ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ಬಿಬಿಎಂಪಿ ನೌಕರರ ಕನ್ನಡ ಸಂಘದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ಇಡೀ ದೇಶದ ಪ್ರಮುಖ ನಗರ, ರಾಜ್ಯದ ಹೆಮ್ಮೆಯ ನಗರವಾಗಿದೆ.
ಕನ್ನಡ ಆಡಳಿತ ಭಾಷೆಯಾಗಿದೆ. 6.5ಕೋಟಿ ಜನರ ಮನದಾಳದ ಭಾಷೆಯಾಗಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ. ರಾಜ್ಯದ ಬೆಂಗಳೂರು ನಗರದಲ್ಲಿ ಕನ್ನಡ ಭಾಷೆ ಬಳಕೆ ಕಡಿಮೆ ಇರಬಹುದು ಹಳ್ಳಿ, ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಾಗುತ್ತಿದೆ. ಹಾಗಾಗಿ ಬಿಬಿಎಂಪಿಯಿಂದ ಕನ್ನಡದ ಅಭಿವೃದ್ಧಿಗಾಗಿ ಅನೇಕ ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇವೆ. ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ ಈ ವರ್ಷ ವಿಶೇಷವಾಗಿ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಅಚರಿಸಲಾಗುತ್ತಿದೆ. ಉಪಮುಖ್ಯಮಂತ್ರಿಗಳ ಸಾಮಾಜಿಕ ಜಾಲತಾಣದ ಮೂಲಕ ಐಟಿ.ಬಿಟಿ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಬಾವುಟ ಪ್ರದರ್ಶನ ಮಾಡಬೇಕು ಎಂದು ಕಟ್ಟಪ್ಪಣೆ ನೀಡಲಾಗಿದೆ. ಕನ್ನಡ ಭಾಷೆಯ ಸಂಪೂರ್ಣ ಬಳಕೆ ಮಾಡಬೇಕು. ಕನ್ನಡ ಭಾಷೆ ಬಳಸಿ, ಬೆಳೆಸಬೇಕು. ಬಿಬಿಎಂಪಿಯಲ್ಲಿ ಸಂಪೂರ್ಣ ಆಡಳಿತ ವ್ಯವಹಾರ ಕನ್ನಡ ಭಾಷೆಯಲ್ಲಿ ನಡೆಯುತ್ತದೆ ಎಂದು ಹೇಳಿದರು.

ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ ಮಾತನಾಡಿ ಕನ್ನಡ ಭಾಷೆ ಉಳಿಸಿ, ಬೆಳೆಸಲು ಅಧಿಕಾರಿಗಳ ಪರಿಶ್ರಮ ಮುಖ್ಯ. ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಿ ಎಂದು ನೋಟಿಸ್ ಕೊಡಿ, ನೋಟಿಸ್ ಗೆ ಮಣಿಯದೇ ಹೋದರೆ ವಾಣಿಜ್ಯ ಮಳಿಗೆಗಳಿಗೆ ಬೀಗ ಜಡಿಯಬೇಕು ಎಂದು ಹೇಳಿದರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಮಾತನಾಡಿ ಕನ್ನಡ ಭಾಷೆ ಉಳಿಸಿ, ಬೆಳೆಸಬೇಕು, ಕನ್ನಡ ಭಾಷೆ ವಿಶ್ವ ಭಾಷೆಯಾಗಬೇಕು ಎಂಬ ನಿಟ್ಟಿನಲ್ಲಿ ಸಂಘದ ವತಿಯಿಂದ ಉತ್ತರಖಂಡ್ ರಾಜ್ಯದಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ನವಂಬರ್ 16ನೇ ರಂದು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ನೇಪಾಳದಲ್ಲಿ ಹಾಗೂ ಕಾಶಿಯಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಯಿತು.
ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ರಾಜ್ಯದಿಂದ ಹೊರ ರಾಜ್ಯ, ರಾಷ್ಟ್ರಗಳಿಗೆ ಪರಿಚಯಿಸುವ ವಿಶ್ವವ್ಯಾಪಿಯಲ್ಲಿರುವ ಕನ್ನಡಿಗರನ್ನು ತಲುಪುಬೇಕು ಮತ್ತು ಕನ್ನಡೇತರಿಗೆ ಕನ್ನಡ ನಾಡಿನ ಪರಿಚಯ, ಕನ್ನಡ ಭಾಷೆ ಕಲಿಸುವ ಕಾರ್ಯಕ್ರಮ ನಮ್ಮ ಸಂಘಟನೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಡಾ.ಕೆ.ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಜಂಟಿ ಆಯುಕ್ತರಾದ ಲಕ್ಷ್ಮಿದೇವಿ, ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್, ಪದಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳಾದ ಬಾಬಣ್ಣ, ಡಾ.ಶೋಭಾ, ಡಿ.ರಾಮಚಂದ್ರ, ಕೆ.ಜಿ.ರವಿ, ರುದ್ರೇಶ್ ಬಿ., ಸೋಮಶೇಖರ್ ಎನ್.ಎಸ್., ಹೆಚ್.ಕೆ.ತಿಪ್ಪೇಶ್, ಹರೀಶ್ ಹೆಚ್.ಬಿ., ನರಸಿಂಹ, ಮಂಜೇಗೌಡ, ಆರ್.ರೇಣುಕಾಂಬ,ಎಸ್.ಜಿ.ಸುರೇಶ್, ಮಂಜುನಾಥ್, ಉಮೇಶ್ ವಿ, ಸಂತೋಷ್ ಕುಮಾರ್ ನಾಯ್ಕ್, ಶ್ರೀಧರ್, ಸಂತೋಷ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ಬಿಬಿಎಂಪಿ ನೌಕರರ ಕನ್ನಡ ಸಂಘದ ಸಹಯೋಗದಲ್ಲಿ ನವಂಬರ್ 16ರಂದು ಉತ್ತರಖಂಡ್ ರಾಜ್ಯದ ಹರಿದ್ವಾರ ಮತ್ತು ಋಷಿಕೇಶದ ಗಂಗಾ ನದಿ ತೀರದಲ್ಲಿ ನಡೆಯಲಿರುವ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಲಾಂಛನ ಮತ್ತು ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.


Leave a Reply

Your email address will not be published. Required fields are marked *