December 25, 2024

ಉಡುಪಿ: ರಕ್ತದಾನವು ಮಾನವೀಯತೆಯ ಸಂಕೇತವಾಗಿದೆ ಎಂದು ಅಬೂಬಕ್ಕರ್ ಸಿದ್ದಿಕ್ಕಿ ಸಕಾಫಿ ಹೇಳಿದರು.
ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಆಶ್ರಯದಡಿಯಲ್ಲಿ
“ಬಾಯ್ಸ್ ಅಸೋಸಿಯೇಷನ್
ಹಂಗಳೂರು” ವತಿಯಿಂದ ಹಂಗಳೂರಿನ ಯುನಿಟಿ ಹಾಲ್ ನಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನಕ್ಕೆ ಯಾವುದೇ ಜಾತಿಧರ್ಮ ಇಲ್ಲ.
ದಾನದಲ್ಲಿ ಶ್ರೇಷ್ಠದಾನ ರಕ್ತದಾನ. ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದು. ರಕ್ತದಾನದಿಂದ ಅನೇಕ ದೈಹಿಕ ಪ್ರಯೋಜನಗಳಿವೆ ಎಂದು ಹೇಳಿದರು.

“ಬಾಯ್ಸ್ ಅಸೋಸಿಯೇಷನ್ ಹಂಗಳೂರು” ಇದರ ಅಧ್ಯಕ್ಷ ಅಬು ಹಂಗಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಬಾಯ್ಸ್ ಅಸೋಸಿಯೇಷನ್
ಹಂಗಳೂರು” ತಂಡವು ಈ ಭಾಗದಲ್ಲಿ ತನ್ನದೇ ಆದ ಸಮಾಜ ಸೇವೆಯನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ಎಲ್ಲಾ ಜಾತಿ ಧರ್ಮದ ಜನಾಂಗದವರು, ಮಹಿಳೆಯರೂ ಕೂಡ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಉಡುಪಿ ಜಿಲ್ಲೆಯ ಈ ಭಾಗದಲ್ಲಿ ಶಾಂತಿ ಹಾಗೂ ಸೌಹಾರ್ದತೆಗೆ ಮಾದರಿಯಾದಂತಹ ಊರು ಇದಾಗಿದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಉದಾಹರಣೆಯಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಕೂಡ ನಾವು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಎಸ್.ಜಯಕರ ಶೆಟ್ಟಿ,
“ಬಾಯ್ಸ್ ಹಂಗಳೂರು ಅಸೋಸಿಯೇಷನ್”
ಗೌರವಾಧ್ಯಕ್ಷ ಯೂಸುಫ್ ಅಲ್ಸಾರ, ಹಂಗಳೂರಿನ ಜುಮ್ಮಾ ಮಸ್ಜಿದ್ ಅಧ್ಯಕ್ಷ ಬಾಬು ಕಲಂದರ್, ಹಂಗಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್,
ಪ್ಲೆಸೆಂಟ್ ರೆಡ್ ಕ್ರಾಸ್ ನ ಸದಸ್ಯರಾದ ಆರ್.ಟಿ.ಎನ್ ಬಶೀರ್, ಕಾರ್ಯದರ್ಶಿ
ಅಬ್ದುಲ್ ಶಾಹಿದ್, ಖಜಾಂಚಿ ಹೆಚ್.ಎಂ.ಮುಸ್ತಫ ಮುಂತಾದವರು ಉಪಸ್ಥಿತರಿದ್ದರು.

ಈ ತಂಡವು ಇದೇ ರೀತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ. ಹಾಗೆಯೇ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ಸಮಾಜದಲ್ಲಿ ಭ್ರಾತತ್ವ ಸಹೋದರತೆ, ಸಮಾನತೆ, ಶಾಂತಿ, ಸೌಹಾರ್ದತೆ ಹಾಗೂ ಮಾನವೀಯತೆಯ ಗುಣಗಳನ್ನು ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬಾಯ್ಸ್ ಹಂಗಳೂರು ತಂಡಕ್ಕೆ ಸ್ಥಳೀಯ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದರು.

-ಆರತಿ ಗಿಳಿಯಾರು ಉಡುಪಿ.


Leave a Reply

Your email address will not be published. Required fields are marked *