December 23, 2024

ಭಟ್ಕಳ: ನಾವು ಪರಾವಲಂಬಿಗಳಾಗಿದ್ದೇವೆ. ಸ್ವಾವಲಂಭಿಗಳಾಗಿಲ್ಲ, ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇರುವ ಕಾರಣಕ್ಕೆ ಅವರು ನಡೆಸುವ ಹತ್ತು ಹಲವಾರು ಕಾರ್ಯಕ್ರಮದಿಂದ ಸಮಾಜ ಪರಿವರ್ತನೆ ಆಗುತ್ತಿದೆ. ಇದರಿಂದಾಗಿ ಒಂದು ಭರವಸೆ ಮೂಡಿದೆ ಎಂದು ಶ್ರೀನಾಗಯಕ್ಷೇ ದೇವಸ್ಥಾನದ ಧರ್ಮಧರ್ಶಿಗಳಾದ ರಾಮದಾಸ ಪ್ರಭು ಹೇಳಿದರು.
ಭಟ್ಕಳದ ಶ್ರೀನಾಗಯಕ್ಷೇ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ಟಸ್ಟ್ ಹಮ್ಮಿಕೊಂಡಿರುವ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಹಾಗೂ ತಾಲೂಕಾ ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ನಾವು ಮಕ್ಕಳ ಕೈಯಿಂದ ಮೊಬೈಲ್ ತಪ್ಪಿಸುವ ಕೆಲಸ ಮಾಡಬೇಕಾಗಿದೆ. ಮಕ್ಕಳು ಅತ್ತಾಗ, ಊಟ ಮಾಡಿಸುವಾಗ ಅವರ ಕೈಗೆ ಮೊಬೈಲ್ ನೀಡಬಾರದು. ಅದು ಮಕ್ಕಳಿಗೆ ಗೀಳಾಗಿ ಪರಿಣಮಿಸುತ್ತದೆ. ಇದರಿಂದ ಮಕ್ಕಳ ಮಾನಸಿಕ ಆರೋಗ್ಯ ಹದಗೆಡುತ್ತದೆ. ಸಮಾಜ ಹಣದ ಬೆನ್ನಿಗೆ ಬಿದ್ದು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅರ್ಚನಾ ನಾಯ್ಕ ಮಾತನಾಡಿ ಪಾಲಕರಾದವರು ತಮ್ಮ ಮಕ್ಕಳಿಗೆ ಸಂಸ್ಕಾರವನ್ನು ನೀಡಬೇಕು. ನಮ್ಮೂರ ಭಾಷೆಗೆ ಪ್ರಾಧಾನ್ಯತೆ ನೀಡಬೇಕು‌. ನಾವು ಆಡು ಭಾಷೆಯನ್ನು ಸರಿಯಾಗಿ ಕಲಿತಾಗ ಮಾತ್ರ ಇತರ ಭಾಷೆಗಳನ್ನು ಕಲಿಯಬಹುದು. ಶಾಲೆಗೆ ಹೋಗುವ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಮಕ್ಕಳು ಶಾಲೆಗೆ ಬಂದಾಗ ಊಟದ ಸಮಯದಲ್ಲೂ ಫಾಸ್ಟ್ ಫುಡ್ ಗಳನ್ನು ಸೇವಿಸುತ್ತಾರೆ. ಇದರಿಂದಾಗಿ ಮಕ್ಕಳಲ್ಲಿ ರಕ್ತ ಹೀನತೆಯಂತ ಅನೇಕ ಖಾಯಿಲೆಗಳು ಭಾಧಿಸುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ರವಿ.ಎಮ್ ನಾಯ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುಷ್ಪಗುಚ್ಛ ಸ್ಪರ್ಧೆ, ಆರತಿ ತಟ್ಟೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಸ್ವ ಉದ್ಯೋಗ ಮಳಿಗೆಗಳ ಪ್ರದರ್ಶನ, ಕುಣಿತ ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಸಂಧರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹೇಶ್.ಎಮ್.ಡಿ, ಸಂಯೋಜನಾಧಿಕಾರಿಗಳಾದ ಗಣೇಶ ನಾಯ್ಕ, ಸಮನ್ವಯಾಧಿಕಾರಿ ವಿನೋಧಾ ಬಾಲಚಂದ್ರ, ಸತೀಶ್ ಶೇಟ್, ಭಾಸ್ಕರ ನಾಯ್ಕ ಇನ್ನಿತರರು ಇದ್ದರು.

-ಲೋಕೇಶ್ ನಾಯ್ಕ್, ಭಟ್ಕಳ.


Leave a Reply

Your email address will not be published. Required fields are marked *