ಭಟ್ಕಳ: ಸಿ.ಎಮ್.ಎಫ್ ಐ ನೀಡಿದ ಶಿಫಾರಸಿನ ಮೇರೆಗೆ ಮಹಾರಾಷ್ಟ್ರ, ಕೇರಳ, ಗುಜರಾತ್, ಕರ್ನಾಟಕದಲ್ಲಿ ಬೆಳಕು ಮೀನುಗಾರಿಕೆ ನಡೆಯುತ್ತಿದ್ದು, 12 ನಾಟಿಕಲ್ ಮೈಲುಗಳ ಆಚೆ ಬೆಳಕು ಮೀನುಗಾರಿಕೆ ನಡೆಸಲಾಗುತ್ತಿದೆ. ಆದ್ದರಿಂದ ಬೆಳಕು ಮೀನುಗಾರಿಕೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗಾಗಲಿ ಅಥವಾ ನಾಡದೋಣಿ ಮೀನುಗಾರಿಕೆಗಾಗಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಅಖಿಲ ಕರ್ನಾಟಕ ಪರ್ಷಿಯನ್ ಮೀನುಗಾರರ ಸಂಘದ ಉಪಾಧ್ಯಕ್ಷ ನವೀನ್ ಬಂಗೇರ ಹೇಳಿದರು.
ಇತ್ತಿಚೆಗೆ ಬೆಳಕು ಮೀನುಗಾರಿಕೆಯ ವಿರುದ್ಧ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಪರ್ಷಿಯನ್ ಮೀನುಗಾರರ ಸಂಘವು ಸರ್ಕಾರ ಬೆಳಕು ಮೀನುಗಾರಿಕೆ ನಿಷೇಧಿಸದಂತೆ ಸಚಿವರ ಜತೆ ಸಭೆ ನಡೆಸಿ ತದನಂತರ ಪಟ್ಟಣದ ಶಾದಿ ಮಹಲ್ ಸಭಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಅವರು ಮಾತನಾಡಿದರು.
ನಾವು ಬೆಳಕು ಮೀನುಗಾರಿಕೆಯನ್ನು ಕ್ರಮಬದ್ಧವಾಗಿ ಮಾಡುತ್ತಿದ್ದು, ನಾಡದೋಣಿ, ಪರ್ಶಿನ್ ಬೋಟ್, ಟ್ರಾಲ್ ಬೋಟ್ ಎಲ್ಲಾ ವಿಭಾಗದ ಮೀನುಗಾರರೊಂದಿಗೆ ಅನ್ಯೋನತೆಯಿಂದ ಇದ್ದೇವೆ. ಕೆಲವರು ತಮ್ಮ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುವ ಸಲುವಾಗಿ ನಮ್ಮ ನಡುವೆ ಪಿತೂರಿ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಮಂಗಳೂರಿನಿಂದ ಕಾರವಾರದವರೆಗೆ ಸುಮಾರು 1000 ಬೋಟುಗಳಿದ್ದು, ಸುಮಾರು 40 ರಿಂದ 45 ಸಾವಿರ ಜನರಿಗೆ ನೇರ ಉದ್ಯೋಗ ದೊರಕಿಸಿಕೊಟ್ಟಿದೆ. ಮೀನುಗಾರಿಕೆ ವರ್ಷದಲ್ಲಿ ಡಿಸೆಂಬರ್ ನಿಂದ ಮಾತ್ರ ಲೈಟ್ ಮೀನುಗಾರಿಕೆ ನಡೆಸುತ್ತಿದ್ದು, ಅಗಸ್ಟ್ ನಿಂದ ಲೈಟ್ ಮೀನುಗಾರಿಕೆ ನಡೆಸುತ್ತಿದ್ದೇವೆ ಎಂಬ ಆರೋಪ ದುರುದ್ದೇಶವಾಗಿದೆ.
ಆ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಲೈಟ್ ಫಿಶಿಂಗ್ ನಡೆಸಲು ಬರುವುದಿಲ್ಲ. ಮೀನಿನ ಮರಿಗಳನ್ನು ಹಿಡಿದುಕೊಂಡು ಬರುತ್ತಾರೆ ಎಂಬ ಆರೋಪಕ್ಕೆ ನಾವು 45 ಎಮ್.ಎಮ್ ಬಲೆಗಳನ್ನು ಉಪಯೋಗಿಸುವುದರಿಂದ ಮರಿ ಮೀನುಗಳನ್ನು ಹಿಡಿಯುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗುರುದಾಸ ಬಂಗೇರ, ಗೌರವಾಧ್ಯಕ್ಷರಾದ ಬಾಬು ಕುಬಾಲ್, ವೆಂಕಟರಮಣ ಮೊಗೇರ, ಯಾದವ್ ಮೊಗೇರ, ಎಲ್ಲಾ ಬಂದರಿನ ಪರ್ಶಿಯನ್ ಬೋಟ್ ಅಧ್ಯಕ್ಷರು ಭಾಗಿಯಾಗಿದ್ದರು.
-ಲೋಕೇಶ್ ನಾಯ್ಕ, ಭಟ್ಕಳ.