ಡಿ.ಆನಂದ್ ಕೌಶಿಕ್
ಅರಸೀಕೆರೆ: ತುಮಕೂರಿನಿಂದ ಶಿವಮೊಗ್ಗದವರೆಗೂ ನಿರ್ಮಾಣವಾಗುತ್ತಿರುವ ಬೈಪಾಸ್ ರಸ್ತೆ ನಿರ್ಮಾಣ ಪೂರ್ಣಗೊಳ್ಳದಿದ್ದರೂ ಟೋಲ್ ಗೇಟ್ ಗಳಲ್ಲಿ ಸುಂಕ ವಸೂಲಾತಿ ಮಾಡುತ್ತಿರುವುದಕ್ಕೆ ಸಾರ್ವಜನಿಜರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತುಮಕೂರಿನಿಂದ ಶಿವಮೊಗ್ಗದವರೆಗೂ ಸುಮಾರು 200 ಕಿ.ಮೀ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಲವಾರು ಕಡೆ ತಾಂತ್ರಿಕ ಅಡಚಣೆಗಳಿಂದ ರಸ್ತೆ ನಿರ್ಮಾಣವು ಸಂಪೂರ್ಣ ನಿರ್ಮಾಣ ಆಗಿರುವುದಿಲ್ಲ. ಹಲವು ಕಡೆ ಸೇತುವೆಗಳು ನಿರ್ಮಾಣವಾಗದಿದ್ದರೆ, ಕೆಲವು ಕಡೆ ರೈತರು ತಮ್ಮ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕೋರ್ಟ್ ಮೊರೆ ಹೊಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಕೆಲವು ಕಡೆ ಅವೈಜ್ಞಾನಿಕವಾಗಿ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಿದ್ದರೆ, ಮತ್ತೊಂದೆಡೆ ಹಳ್ಳಿಗಳಿಗೆ ಹೋಗುವ ಮಾರ್ಗಕ್ಕೆ ಸರ್ವೀಸ್ ರಸ್ತೆಗಳಿಲ್ಲದೇ ಸ್ಥಳಿಯರು ಅನೇಕ ಪ್ರತಿಭಟನೆಗಳನ್ನು ಮಾಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಸಂಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ 206 ಬೈ ಪಾಸ್ ರಸ್ತೆಯ ಸ್ಥಾಪನೆ ಮಾಡಿರುವ ಟೋಲ್ ಗೇಟ್ ಗಳಲ್ಲಿ ವಾಹನ ಚಾಲಕರು ಮತ್ತು ಮಾಲಿಕರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ.
ಇದಕ್ಕೆ ಉದಾಹರಣೆಯಾಗಿ ಇಂದು ತಾಲ್ಲೂಕಿನ ಬಾಣಾವರ ಟೋಲ್ ಗೇಟ್ ಬಳಿ ಸುಂಕ ವಸೂಲಿ ಮಾಡುತ್ತಿದ್ದ ಸಂದರ್ಭದಲ್ಲಿ ಮುಖಂಡ ದರ್ಶನ್ ದಾಸ್ ಇವರು ಪ್ರಶ್ನಿಸಲಾಗಿ ನಮಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಇಲಾಖೆಯಿಂದ ಆದೇಶ ಬಂದಿರುವುದರಿಂದ ವಸೂಲಾತಿ ಮಾಡುತ್ತಿದ್ದೇವೆ ಎಂಬ ಉತ್ತರವನ್ನು ನೀಡುತ್ತಿದ್ದಾರೆ. ಈ ಟೋಲ್ ಗೇಟ್ ಗಳ ಸಿಬ್ಬಂದಿಗೆ ಸ್ಥಳಿಯ ಭಾಷೆ ಕನ್ನಡ ಬರದಿರುವುದರಿಂದ ಪ್ರತಿನಿತ್ಯ ವಾಹನ ಚಾಲಕರು ಮಾತಿನ ಚಕಮಕಿ ನಡೆಸಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ಬೆಳವಣಿಗೆಗಳು ನಡೆಯುತ್ತಿವೆ.
ರಸ್ತೆ ಸಂಪೂರ್ಣ ಅಭಿವೃದ್ಧಿ ಪಡೆಸದೇ, ಉದ್ಘಾಟನೆಯೂ ಆಗದೇ ವಾಹನ ಚಾಲಕರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಇದು ಮೂಲಭೂತ ಸೌಕರ್ಯಗಳನ್ನು ನೀಡದೆ ಸಂಚಾರಕ್ಕೆ ತೆರೆವುಗೊಳಿಸಿರುವುದು ಕಾನೂನು ಬಾಹಿರವಾಗಿದೆ. ಸಂಪೂರ್ಣ ಅಭಿವೃದ್ದಿಯೊಂದಿಗೆ ರಸ್ತೆ ನಿರ್ಮಾಣ ಮಾಡದೇ ಸುಂಕ ವಸೂಲಾತಿ ಮಾಡುತ್ತಿರುವುದು ಒಂದು ರೀತಿಯ ದದ್ಬಾಳಿಕೆ ಮೂಲಕ ಸುಂಕ ವಸೂಲಾತಿ ಮಾಡುತ್ತಿರುವಂತಿದೆ.
ರಸ್ತೆ ಅಭಿವೃದ್ಧಿ ಪಡಿಸದೇ ಸುಂಕ ವಸೂಲಾತಿ ಮುಂದುವರೆದಲ್ಲಿ ರಸ್ತೆ ತಡೆ ಮಾಡುವುದರೊಂದಿಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು ಸೇರಿದಂತೆ ಟೋಲ್ ಸುತ್ತಮುತ್ತಲಿರುವ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.