ಉಡುಪಿ: ಅಧಿಕಾರದ ಹಪಾಹಪಿಯಿಂದ ಪಂಚ ಗ್ಯಾರಂಟಿಗಳ ಆಮಿಷವೊಡ್ಡಿ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಡೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.
ಪತ್ರಿಕಾ ಪ್ರಕಟಣೆಯ ಮೂಲಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಅತ್ತ ಗ್ಯಾರಂಟಿಗಳನ್ನೂ ಸರಿಯಾಗಿ ನಿಭಾಯಿಸದೆ, ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿ ಬೊಕ್ಕಸವನ್ನು ಬರಿದಾಗಿಸಿರುವ ಭ್ರಷ್ಟ ಕಾಂಗ್ರೆಸ್ ಸರಕಾರ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಿ ರಾಜ್ಯದ ಜನತೆಗೆ ಮಂಕು ಬೂದಿ ಎರಚಿದೆ.
ಆಡಳಿತ ವೈಫಲ್ಯದಿಂದ ಕಂಗೆಟ್ಟಿರುವ ರಾಜ್ಯ ಕಾಂಗ್ರೆಸ್ ಸರಕಾರ ದಿವಾಳಿಯ ಅಂಚಿಗೆ ತಲುಪಿದ್ದು, ಪೆಟ್ರೋಲ್ ದರವನ್ನು ಪ್ರತೀ ಲೀಟರ್ ಗೆ 3 ರೂ. ಹಾಗೂ ಡೀಸೆಲ್ ದರವನ್ನು ಪ್ರತೀ ಲೀಟರ್ ಗೆ 3 ರೂ. 50 ಪೈಸೆಗೆ ಏರಿಸುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಜನತೆಯ ಜೇಬಿಗೇ ಪದೇ ಪದೇ ಕತ್ತರಿ ಹಾಕುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ.
ಅಕ್ಕಿ ಬೇಳೆ ಕಾಳು, ಹಾಲು, ವಿದ್ಯುತ್ ದರದ ಸಹಿತ ಆಸ್ತಿ ನೋಂದಣಿ, ಸ್ಟ್ಯಾಂಪ್ ಪೇಪರ್ ಮುಂತಾದ ಮುಲಭೂತ ಆದ್ಯತೆಗಳ ಬೆಲೆ ಏರಿಕೆ ಜೊತೆಗೆ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತಕ್ಷಣ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅದೇಶವನ್ನು ಹಿಂಪಡೆಯಬೇಕು. ತಪ್ಪಿದಲ್ಲಿ ರಾಜ್ಯದ ಜನತೆ ಮುಂಬರಲಿರುವ ಜಿ.ಪಂ, ತಾ.ಪಂ. ಸಹಿತ ಎಲ್ಲಾ ಚುನಾವಣೆಗಳಲ್ಲಿ ಜನ ವಿರೋಧಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉದಯಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.