ಬೆಂಗಳೂರು: ಮಾರ್ಚ್ ಅಂತ್ಯದೊಳಗೆ ಎಂಇಐ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಹೇಳಿದರು. ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಯಶವಂತಪುರ ರೈಲ್ವೆ ನಿಲ್ದಾಣದ ಬಳಿಯ ತಣ್ಣೀರಹಳ್ಳ ಹಾಗೂ ರೈಲ್ವೆ ಕ್ವಾಟ್ರಸ್ ಬಳಿ ಮಳೆಗಾಲದಲ್ಲಿ ಜಲಾವೃತವಾಗುವುದನ್ನು ತಪ್ಪಿಸುವ ಸಲುವಾಗಿ 200 ಮೀಟರ್ ಉದ್ದದ ಪೈಪ್ ಲೈನ್ ಅಳವಡಿಕೆಯನ್ನು ಪರಿಶೀಲಿಸಿ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.
ತಣ್ಣೀರಹಳ್ಳ ಪ್ರದೇಶದಲ್ಲಿ ಜಲಾವೃತವಾಗುವುದನ್ನು ತಡೆಯಲು 1.8 ಮೀಟರ್ ನ ಸಿಮೆಂಟ್ ಕೊಳವೆ (ಪೈಪ್) ಅಳವಡಿಸಲಾಗುತ್ತಿದ್ದು, ಈ ಕಾಮಗಾರಿಯನ್ನು 1.5 ಕೋಟಿ ರೂ. ವೆಚ್ಚದಲ್ಲಿ ಕೈಗತ್ತಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಂಡರೆ ಇಲ್ಲಿ ಯಾವುದೇ ರೀತಿಯ ಜಲಾವೃತವಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಯಶವಂತಪುರದ ಎಂಇಐ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಮಾರ್ಚ್ 2025ರ ಅಂತ್ಯೊಳಗಾಗಿ ಪೂರ್ಣಗೊಳಿಸಲು ಸೂಚನೆ ನಡೆಸಿದರು.
950 ಮೀ. ಉದ್ದದ ಎಂಇಐ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಕಳೆದ 2 ತಿಂಗಳಿಂದ ವೈಟ್ ಟಾಪಿಂಗ್ ಕಾಮಾಗರಿ ಪ್ರಾರಂಭಿಸಲಾಗಿದೆ. ಎರಡೂ ಬದಿಯ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿ ಕಾಮಗಾರಿ ನಡೆಸಲಾಗುತ್ತಿದೆ. ಈ ರಸ್ತೆಯಲ್ಲಿ ನೀರುಗಾಲುವೆ, ಸ್ಯಾನಿಟರಿ ಲೈನ್, ಡಕ್ಟ್ ಅಳವಡಿಕೆ, ವಿದ್ಯುತ್ ಲೈನ್ ಚೇಂಬರ್ ಕಾಮಗಾರಿ ಬಹುತೇಖ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ. ವೈಟ್ ಟಾಪಿಂಗ್ ಕಾಮಗಾರಿಯನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಈ ವೇಳೆ ವಲಯ ಆಯುಕ್ತರಾದ ಸತೀಶ್, ವಲಯ ಜಂಟಿ ಆಯುಕ್ತರಾದ ಡಾ.ಆರತಿ ಆನಂದ್, ವಲಯ ಮುಖ್ಯ ಅಭಿಯಂತರರಾದ ಸ್ವಯಂಪ್ರಭ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.