ಉಡುಪಿ: ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುರುಪೀಠಗಳಲ್ಲೊಂದಾದ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆ ಮತ್ತು ಸಮಾಜದ ಉದ್ಧಾರಕ್ಕಾಗಿ ಹಮ್ಮಿಕೊಂಡ, ಮಠಾಧಿಪತಿಗಳಾದ ಶ್ರೀಶ್ರೀಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ ಅವರಿಂದ ಉಪದೇಶಿಸಲ್ಪಟ್ಟ ಶ್ರೀರಾಮನಾಮ ಜಪ ಅಭಿಯಾನವು ತಾರೀಕು 10 ಮೇ 2024ರ ಅಕ್ಷಯ ತೃತೀಯದ ವಿಶೇಷ ದಿನದಂದು ಶ್ರೀದೇವಳದಲ್ಲಿ ಪ್ರಾರಂಭಗೊಂಡಿದೆ. 18 ಅಕ್ಟೋಬರ್ 2025 ರವರೆಗೆ ನಡೆಯುವ ಈ ಅಭಿಯಾನದ ಪ್ರಥಮ ದಿನದ ಮೊದಲನೆಯ ಪಾಳಿಗೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಜಪಕರು ತುಂಬಾ ಉತ್ಸಾಹದಿಂದ ಪಾಲ್ಗೊಂಡರು. ಶ್ರೀರಾಮ ನಾಮಜಪ ಅಭಿಯಾನಕ್ಕೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನವನ್ನು ಜಪ ಕೇಂದ್ರವನ್ನಾಗಿ ಮಾಡಿ “ಶ್ರೀರಘುನಾಯಕ” ಎಂದು ನಾಮಕರಿಸಿ ಉಡುಪಿಯ ಎಲ್ಲಾ ಭಜಕರಿಗೆ ಶ್ರೀಗುರುಗಳು ವಿಶೇಷ ಅನುಗ್ರಹ ನೀಡಿದ್ದಾರೆ.
ಇಲ್ಲಿ ನಡೆಯುವ ಶ್ರೀರಾಮನಾಮ ಜಪ ಅಭಿಯಾನಕ್ಕೆ ಉಡುಪಿಯ ಸಮಾಜ ಬಾಂಧವರು ಮಾತ್ರವಲ್ಲದೆ ಹತ್ತಿರದ ಊರಿನವರು ಅಂದರೆ ಕಟಪಾಡಿ, ಉದ್ಯಾವರ, ಮುಲ್ಕಿ, ಕಾಪು, ಪಡುಬಿದ್ರೆ, ಮಲ್ಪೆ, ಹಿರಿಯಡ್ಕ, ಹರಿಕಂಡಿಗೆ, ಮಣಿಪಾಲ, ಕಲ್ಯಾಣಪುರ ಹೀಗೆಲ್ಲಾ ಕಡೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಬಂದು ಈ ಜಪದಲ್ಲಿ ಭಾಗವಹಿಸಲು ಅವಕಾಶವಿದೆ. ಹೀಗೆ ಪರವೂರಿನ ಭಕ್ತಾಭಿಮಾನಿಗಳೂ ತಮ್ಮ ಹತ್ತಿರದ ಕೇಂದ್ರಕ್ಕೆ ಹೋಗಿ ರಾಮನಾಮ ಜಪದಲ್ಲಿ ಭಾಗವಹಿಸುವ ಮುಖೇನ ಶ್ರೀದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ದಿ. 10 ರಿಂದ 18 ಮೇ 2024 ಪ್ರತಿದಿನ ಸಂಜೆ 4:00 ರಿಂದ 5:30, 19 ಮೇ 2024 ರಿಂದ ಪ್ರತಿದಿನ ಸಂಜೆ 5:45 ರಿಂದ 7:00 ಗಂಟೆಯವರೆಗೆ, ಪ್ರತಿ ಆದಿತ್ಯವಾರ ವಿಶೇಷ ಪಾಳಿ ಬೆಳಗ್ಗೆ 9:30 ರಿಂದ 11:00 ಗಂಟೆಯವರೆಗೆ ಉಡುಪಿಯ ಶ್ರೀದೇವಳದಲ್ಲಿ ಆಯೋಜಿಸಲಾಗಿದೆ. ಈ ಎಲ್ಲಾ ಪಾಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಬೇಕಾಗಿ ರಾಮನಾಮ ಕಮಿಟಿಯ ಸದಸ್ಯರು ವಿನಂತಿಸಿದ್ದಾರೆ. ಉಡುಪಿಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಡೆದ ಶ್ರೀರಾಮನಾಮಜಪ ಅಭಿಯಾನಕ್ಕೆ ಶ್ರೀದೇವಳದ ಆಡಳಿತ ಮಂಡಳಿಯ ಸದಸ್ಯರು, ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಜಪ ಕಮಿಟಿಯ ಸದಸ್ಯರು, ಯುವಕ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು ಮತ್ತು ಜನಸಾಮಾನ್ಯರು ಈ ಅಭಿಯಾನದಲ್ಲಿ ಭಾಗವಹಿಸಿದರು.