December 23, 2024

ತುರುವೇಕೆರೆ: ತಾಲೂಕು ಆಡಳಿತ ಕಚೇರಿ ಮುಂದೆ ರೈತ ಹೋರಾಟಗಾರ ನಂಜುಂಡಸ್ವಾಮಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಇಟ್ಟುಕೊಂಡು ತಾಲ್ಲೂಕು ಕಚೇರಿಯ ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ದಲಿತ ವಿಜಯ್ ಕುಮಾರ್ ಏಕಾಂಗಿಯಾಗಿ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿದರು.
ಧರಣಿ ನಿರತ ವಿಜಯ್ ಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ ತಾಲೂಕು ಕಚೇರಿಗೆ ಈ ಆಫೀಸ್ ಬಗ್ಗೆ ದಾಖಲೆ ಪತ್ರಗಳನ್ನು ಮಾಹಿತಿ ಹಕ್ಕು ಅದಿನಿಯಮದಡಿ ಮಾಹಿತಿ ಕೇಳಿದ್ದೇನೆ. ಮಾಹಿತಿ ಹಕ್ಕು ಅಧಿನಿಯಮದ ಅರ್ಜಿಗೆ 50 ಪುಟಗಳಿಗೆ 2ರೂನಂತೆ ಹಣ ಸಂದಾಯ ಮಾಡಲು ನನಗೆ ತಾಲೂಕು ಕಚೇರಿ ವತಿಯಿಂದ ನೊಟೀಸ್ ನೀಡಿತ್ತು. ನೊಟೀಸ್ ಪಡೆದುಕೊಂಡು ಮೇ 9ನೇ ತಾರೀಕಿನಂದು 100 ರೂ ಹಣ ಸಂದಾಯ ಮಾಡಿದ್ದರೂ ಸಹ ವಾರ ಕಳೆದರೂ ಕೇಳಿದ್ದ ಸಂಬಂದಪಟ್ಟ ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ. ತಾಲೂಕು ಕಚೇರಿಗೆ ಹೋಗಿ ಸಂಬಂದಪಟ್ಟ ಸಿಬ್ಬಂದಿಗಳನ್ನು ವಿಚಾರಿಸಿದರೆ ಒಬ್ಬರ ಮೇಲೆ ಒಬ್ಬರು ನೆಪಹೇಳಿಕೊಂಡು ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದ ಉಲ್ಲಂಘನೆಯಾಗುತ್ತಿದೆ ಇದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆ ಯಾಗುತ್ತಿದ್ದು, ಕಚೇರಿಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಕ್ರಮ ಜರುಗಿಸದಿದ್ದರೆ ಕೆಲವು ಸಂಘಟನೆಗಳೊಂದಿಗೆ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಇಂದು ಬೆಳಿಗ್ಗೆ ಸುಮಾರು 10 ಗಂಟೆಯಿಂದ
ಉಪವಾಸ ಕುಳಿದಿದ್ದರೂ ಸಹ ಯಾವ ತಾಲೂಕು ಕಚೇರಿ ಸಿಬ್ಬಂದಿಗಳು ಯುವಕನ ಬಳಿ ಬಂದು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ‌.