December 24, 2024

ಅರಸೀಕೆರೆ: ತಾಲ್ಲೂಕಿನ ಸುಪ್ರಸಿದ್ದ ಶ್ರೀಕ್ಷೇತ್ರ ಹಾರನಹಳ್ಳಿ ಶ್ರೀಕೋಡಿಮಠ ಮಹಾಸಂಸ್ಥಾನದ ಶ್ರೀಶ್ರೀಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ ರವರ ದಿವ್ಯ ಸಾನಿಧ್ಯದಲ್ಲಿ ಶ್ರೀಶ್ರೀಶ್ರೀ ಶಿವಲಿಂಗ ಸ್ವಾಮಿಜಿ ರವರ 137 ನೇ ಸ್ಮರಣಾರಾಧನೆ ಪ್ರಯುಕ್ತ ವಿವಿಧ ಹೂವಿನಿಂದ ಅಲಂಕೃತಗೊಂಡ ಬೆಳ್ಳಿ ಪಲ್ಲಕ್ಕಿ ಉತ್ಸವವು ಭಾವಚಿತ್ರದೊಂದಿಗೆ ಇಂದು ದೇವಾಲಯ ಆವರಣದಲ್ಲಿ ವೈಭವಯುತವಾಗಿ ನೆರವೇರಿತು.
ಗೋಣಿಬೀಡು ಶೀಲಸಂಪಾದನ ಸುಕ್ಷೇತ್ರ ಶಿವಯೋಗಾಶ್ರಮದ ಡಾ.ಶ್ರೀಶ್ರೀಶ್ರೀ ಸಿದ್ಧಲಿಂಗ ಸ್ವಾಮಿಜಿ ರವರು ಬೆಳ್ಳಿ ಪಲ್ಲಕ್ಕಿಯಲ್ಲಿ ಆಸೀನರಾಗಿ ಭಕ್ತಾಧಿಗಳಿಗೆ ಆಶೀರ್ವದಿಸುವುದರ ಮೂಲಕ ಧಾರ್ಮಿಕ ವೇದಿಕೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಮನುಷ್ಯ ಸಾಯದೇ ಹೆಸರು ಮಾಡಬೇಕಾದರೇ ನಮ್ಮನ್ನು ನಾವು ಅರಿಯಲು ಮುಂದಾಗಬೇಕು. ನಮ್ಮನ್ನು ನಾವು ಅರ್ಥ ಮಾಡಿಕೊಂಡಾಗ ಮಾತ್ರ ಸಾವಿರಾರು ವರ್ಷಗಳಾದರೂ ಈ ಜಗತ್ತು ಮರೆಯುವುದಿಲ್ಲ. ಜೀವನದ ಮೌಲ್ಯ ಅರಿವಾಗಬೇಕಾದರೆ ಆಸ್ಪತ್ರೆಗಳಿಗೆ ಭೇಟಿ ಆಗಬೇಕು. ಅಲ್ಲಿ ಅಂತ್ಯದ ದಿನಗಳನ್ನು ಎದುರು ನೋಡುತ್ತಿರುವ ವ್ಯಕ್ತಿಗಳನ್ನು ಕಂಡಾಗ ಭೋಗದ ವಸ್ತುಗಳು ಯಾವುದು ಶಾಶ್ವತವಲ್ಲ ಎಂದು ಅರಿವಾಗುತ್ತದೆ. ಮೊಬೈಲ್ ಬಳಕೆ ಸೇರಿದಂತೆ ಅಧುನಿಕ ಜೀವನ‌ ಒಪ್ಪಿಕೊಳ್ಳುವ ಭರದಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿಗಳನ್ನು ಕಡೆಗಣಿಸಿ ಭ್ರಮೆಯ ಲೋಕದಲ್ಲಿ ಮುಳುಗಿದ್ದೇವೆ. ಇದರಿಂದ ಹೊರ ಬರುವುದರ ಮೂಲಕ ತನ್ನನ್ನು ತಾನು ಧಾರ್ಮಿಕ ಕ್ಷೇತ್ರಕ್ಕೆ ಅರ್ಪಿಸಿಕೊಂಡಲ್ಲಿ ಮಾತ್ರ ಶಾಶ್ವತವಾದ ಹೆಸರಿನೊಂದಿಗೆ ನೆನಪನ್ನು ಈ ಭೂಮಿಯ ಮೇಲೆ ಬಿಟ್ಟು ಹೊಗಲು ಸಾದ್ಯವಾಗುತ್ತದೆ. ಶ್ರೀಕ್ಷೇತ್ರ ಕೋಡಿಮಠವು ಅನಾದಿಕಾಲದಿಂದಲೂ ಧಾರ್ಮಿಕ ವಲಯದಲ್ಲಿ ತನ್ನದೇ ಸೇವೆಯನ್ನು ನೀಡುತ್ತಾ ಬರುತ್ತಿದೆ. ವಿದ್ಯಾಭ್ಯಾಸ, ಅನ್ನ ದಾಸೋಹದೊಂದಿಗೆ ಸಂಸ್ಕಾರ ಸಂಸ್ಕೃತಿಗಳನ್ನು ನೀಡುತ್ತಾ ಬಂದಿದೆ. ಶ್ರೀಕ್ಷೇತ್ರದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ‌ ಮಾಡಿದ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಶ್ರೀಶ್ರೀಶ್ರೀ ಶಿವಲಿಂಗ ಮಹಸ್ವಾಮಿಜಿಯವರ ಶಕ್ತಿಯು ಈ ಕ್ಷೇತ್ರದಲ್ಲಿ ತನ್ನದೇ ಪಾತ್ರವನ್ನು ಭಕ್ತ ವೃಂದದಲ್ಲಿ ವಹಿಸುತ್ತಾ ಲೋಕ ಕಲ್ಯಾಣಕ್ಕಾಗಿ ಕೊಡುಗೆಗಳನ್ನು ನೀಡುತ್ತಿದೆ. ಶ್ರೀಕ್ಷೇತ್ರದ ಭಾವನಾತ್ಮಕ ಸಂಬಂಧದೊಂದಿಗೆ ಸಾರ್ವಜನಿಕ ಕ್ಷೇತ್ರಗಳ ವಿವಿಧ ಸಮುದಾಯಗಳೊಂದಿಗೆ ಭಾಗವಹಿಸಿ ಭಾವೈಕ್ಯತೆಗೂ ಪಾತ್ರವನ್ನು ವಹಿಸಿದೆ. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಪ್ರಸ್ತುತ ಪೀಠಾಧ್ಯಕ್ಷರು ಮತ್ತು ಕಾಲಜ್ಞಾನಿಗಳಾದ ಶ್ರೀಶ್ರೀಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಜಿ ಪ್ರಮುಖ ಪಾತ್ರವಿದೆ ಎಂಬುದನ್ನು ಯಾರು ಮರೆಯಬಾರದು ಎಂದರು.
ಮಠದ ಆವರಣದಲ್ಲಿ ಶ್ರೀಶ್ರೀ ನೀಲಮಜ್ಜಯ್ಯ ಮತ್ತು ಶ್ರೀಶ್ರೀ ಶಿವಲಿಂಗಜ್ಜಯ್ಯನವರ ಗದ್ದುಗೆಗೆ
ಪ್ರಾತಃ ಕಾಲದಿಂದಲೇ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ರಾಜೋಪಚಾರ, ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು, ಹೋಮ ಹವನಾದಿಗಳು ನಡೆಯಲ್ಪಟ್ಟವು.
ಕಳೆದ ಐದು ದಿನಗಳ ಕಾಲ ಶ್ರೀಕ್ಷೇತ್ರದಲ್ಲಿ ನಡೆದ ಪುರಾಣ ಪ್ರವಚನವನ್ನು ಗದಗದ ಎಂ. ಕಲ್ಲಿನಾಥ ಶಾಸ್ತ್ರೀ ಮತ್ತು ವಿವಿಧ ಸಂಘ ಹಾಗು ಮಂಡಳಿಯವರು ಸಾಮೂಹಿಕ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಧಾರ್ಮಿಕ ವೇದಿಕೆಯಲ್ಲಿ ಶ್ರೀಮಠದ ಉತ್ತರಾಧಿಕಾರಿ ಶ್ರೀಶ್ರೀಶ್ರೀ ಚೇತನ ಮರಿದೇವರು, ತೊಗರ್ಸಿ ಮಳೆಮಠದ ಶ್ರೀಶ್ರೀ ವಿರಕ್ತ ಮಠ ಮಹಾಂತ ದೇಶಿಕೇಂದ್ರ ಸ್ವಾಮಿಜಿ, ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತಮಠದ ಡಾ.ಬಸವ ಜಯಚಂದ್ರ ಸ್ವಾಮಿಜಿ, ಕೊಳಗುಂದ ಶ್ರೀ ಕೇದಿಗೆ ಮಠದ ಶ್ರೀಶ್ರೀಶ್ರೀ ಜಯಚಂದ್ರಶೇಖರ ಸ್ವಾಮಿಜಿ, ಬೆಂಗಳೂರು ಚಾಮುಂಡೇಶ್ವರಿ ಶಕ್ತಿಪೀಠದ ಶ್ರೀಶ್ರೀ ಮನೀಶ್ ಗುರೂಜಿ, ಅಕ್ಕಿ ಆಲೂರು ಶ್ರೀ ವಿರಕ್ತಮಠದ ಶ್ರೀಶ್ರೀ ಶಿವಬಸವ ಸ್ವಾಮಿಜಿ, ಕೆ.ಬಿದರೆ ದೊಡ್ಡಮಠದ ಶ್ರೀಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಜಿ‌ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿತ್ಯ ದಾಸೋಹ ಸಮಿತಿ ಕಾರ್ಯದರ್ಶಿ ಸಿದ್ದೇಶ್ ನಾಗೇಂದ್ರ, ಉದ್ಯಮಿ ಜೆ.ಪಿ.ಎನ್ ಜಯಣ್ಣ, ರೂಪರಾಜೇಂದ್ರ ದೇಸಾಯಿ, ಮುರುಗೇಂದ್ರಪ್ಪ,
ಹಾರನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ, ಬಿಕ್ಕೋಡು ಗ್ರಾ.ಪಂ ಮಾಜಿ ಅಧ್ಯಕ್ಷ ವನಿತಾ, ಲಯನ್ಸ್ ಸಂಸ್ಥೆ ಅಧ್ಯಕ್ಷ ಲೋಕೇಶ್, ಮಹದೇವಪ್ಪ, ಅಣ್ಣಾಯ್ಕನಹಳ್ಳಿ ಶಶಿಧರ ಸೇರಿದಂತೆ ವಿವಿಧ ಮಠಾಧೀಶರು, ನೂರಾರು ಭಕ್ತಾಧಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.