December 23, 2024

ಬೆಂಗಳೂರು: ಅನ್ನಮಾಚಾರ್ಯರ ಕೃತಿಗಳ ಸಾಹಿತ್ಯಕ ಮೌಲ್ಯ ಅಜರಾಮರ ಎಂದು ಕೆ.ಆರ್.ಪುರಂ ಹರಿದಾಸ ಸಂಘದ ಅಧ್ಯಕ್ಷ ಡಾ.ಹ.ರಾ.ನಾಗರಾಜ ಆಚಾರ್ಯ ಹೇಳಿದರು.


ಶ್ರೀವಾರಿ ಫೌಂಡೇಶನ್ ವತಿಯಿಂದ ಎಚ್.ಆರ್.ಬಿ.ಆರ್ ಲೇಔಟ್ ನಲ್ಲಿ ನಡೆದ “ಶ್ರೀನಿವಾಸ ಕಲ್ಯಾಣ” ಮಹೋತ್ಸವದಲ್ಲಿ ಸಂಸ್ಕೃತಿ ಚಿಂತಕರು ಹಾಗೂ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ  “ಬೆಟ್ಟದೊಡೆಯನ ಭಕ್ತಾ ಗ್ರೇಸರ ತಾಳ್ಳಪಾಕ ಅನ್ನಮಾಚಾರ್ಯ” ಕೃತಿಯನ್ನು  ಬಿಡುಗಡೆಗೊಳಿಸಿ ಮಾತನಾಡಿದರು. ಜನಸಾಮಾನ್ಯರ ಮನಮಿಡಿವ ಗ್ರಾಮ್ಯ ಶೈಲಿಯ ತೆಲುಗು ಭಾಷೆಯಲ್ಲಿ ರಚಿತವಾದ ಭಕ್ತಿ ಪ್ರಧಾನವಾದ ಕೀರ್ತನೆಯ ಮೌಲ್ಯಗಳು ಇಂದಿಗೂ ಪ್ರಸ್ತುತ. ತಿರುಮಲೆಯ  ಶ್ರೀನಿವಾಸನ ಪರಮಾನುಗ್ರಹಕ್ಕೆ ಪಾತ್ರರಾದ ವಾಗ್ಗೇಯಕಾರ ಅನ್ನಮಯ್ಯ ರವರ ಜಯಂತಿಯ ಸಂದರ್ಭದಲ್ಲಿ   ಕನ್ನಡದ ಓದುಗರಿಗೆ ಪರಿಚಯವನ್ನು ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ ನಿರೂಪಣೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ ಎಂದು ಹೇಳಿದರು.
ಶ್ರೀವಾರಿ ಫೌಂಡೇಶನ್ ನ ಎಸ್.ವೆಂಕಟೇಶಮೂರ್ತಿ,ಖ್ಯಾತ ಗಮಕಿ, ದಾಸ ಸಾಹಿತ್ಯ ಸಂಶೋಧಕ ಮೈಸೂರಿನ ಡಾ.ಎನ್.ಕೆ.ರಾಮಶೇಷನ್, ಗೀತಾ ಮಧ್ವರಾಜ್ ಮುಂತಾದವರು ಉಪಸ್ಥಿತರಿದ್ದರು.