December 23, 2024

ಡಿ.ಆನಂದ್ ಕೌಶಿಕ್

ಹಾಸನ:
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣಾ ಮತಗಳ ಏಣಿಕೆಯಲ್ಲಿ ಎರಡು ದಶಕಗಳ ನಂತರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ 6,70,274 ಮತಗಳನ್ನು ಪಡೆದು, 43,723 ಮತಗಳ ಅಂತರದಿಂದ ಗೆಲುವನ್ನು ತಮ್ಮದಾಗಿಸಿಕೊಂಡರು.

ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 6,26,536 ಮತಗಳನ್ನು ಪಡೆದು ಪರಾಜಯ ಹೊಂದುವುದರ ಮೂಲಕ ಕಳೆದ ಎರಡು ದಶಕಗಳಿಂದ ಜೆಡಿಎಸ್ ಭದ್ರ ಕೋಟೆಯಾಗಿದ್ದ ಹಾಸನ ಲೋಕಸಭಾ ಕ್ಷೇತ್ರವು ಪ್ರಸ್ತುತ ಕಾಂಗ್ರೆಸ್ ಪಕ್ಷ ತನ್ನ ಅಧಿಪತ್ಯ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ.
ಬೆಳಿಗ್ಗೆ ಎಂಟು ಗಂಟೆಯಿಂದ ಪ್ರಾರಂಭವಾದ ಮತ ಏಣಿಕೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ಕಾಯ್ದುಕೊಂಡರೆ, ನಂತರದ ಸುತ್ತಿನ‌ ಮತ ಏಣಿಕೆಗಳಲ್ಲಿ ಶ್ರೇಯಸ್ ಪಟೇಲ್ ಹೆಚ್ಚು ಮತಗಳನ್ನು ಪಡೆಯುತ್ತಾ ಗೆಲುವಿನ ಹೆಜ್ಜೆ ಹಾಕಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಟ್ಟು 13,48,013 ಮತಗಳು ಚಲಾಯಿಸಲಾಗಿದೆ. ಈ ಮತಗಳಲ್ಲಿ 8470 ನೋಟ ಮತಗಳನ್ನು ಹಾಕಲಾಗಿದೆ.
ಜಿಲ್ಲಾಧಿಕಾರಿ ಸತ್ಯಭಾಮ.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜಿತ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ ಏಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮತ ಏಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು.
ಹಾಸನ, ಅರಸೀಕೆರೆ, ಹೊಳೆನರಸೀಪುರ, ಬೇಲೂರು, ಚನ್ನರಾಯಪಟ್ಟಣ, ಅರಕಲಗೂಡು, ಕಡೂರು, ಸಕಲೇಶಪುರ ಸೇರಿದಂತೆ ವಿವಿಧೆಡೆ ಪಟಾಕಿ ಸಿಡಿಸುವುದರ ಮೂಲಕ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು. ಪ್ರಸ್ತುತ ಲೋಕಸಭಾ ಚುನಾವಣೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದ ಟಾಸ್ಕನ್ನು ಸವಾಲಾಗಿ ಸ್ವೀಕರಿಸಿದ್ದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ನಿರೀಕ್ಷೆಯಂತೆ ಶ್ರೇಯಸ್ ಪಟೇಲ್ ರವರನ್ನು 40 ಸಾವಿರ ಅಂತರದಿಂದ ಗೆಲ್ಲಿಸಿಕೊಂಡು ಬಂದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಂತ್ರಿ ಪದವಿ ಕೊಡುವ ಬಗ್ಗೆ ವಚನ ನೀಡಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರಾಜ್ಯ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿತು.

ನಂತರ ಲೋಕಸಭಾ ಚುನಾವಣೆಯಲ್ಲಿ ಶ್ರೇಯಸ್ ಪಟೇಲ್ ಗೆಲುವು ನನ್ನ ಗೆಲುವು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ಒಗ್ಗೂಡಿಸಿಕೊಂಡು ಶ್ರೇಯಸ್ ಪಟೇಲ್ ಇವರನ್ನು ಗೆಲ್ಲಿಸಿಕೊಂಡಿರುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೀಡಿದ್ದ ಸವಾಲಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಉತ್ತರ ಕೊಟ್ಟಂತಾಗಿದೆ. ಈ ಎಲ್ಲಾ ಯಶಸ್ಸಿನ ಬಳಿಕ ಕೊಟ್ಟ ಮಾತಿನಂತೇ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಮಂತ್ರಿ ಪದವಿ ನೀಡಿದಲ್ಲಿ ಮಾತ್ರ ಮಾತಿಗೆ ತಪ್ಪದಂತೆ ಆಗುತ್ತದೆ.