December 24, 2024

ಬೆಂಗಳೂರು: ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು “ಸ್ಲಂ” ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಭಾಗ್ಯವತಿ ಅಮರೇಶ್ ಹೇಳಿದರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಹೊಂಬೇಗೌಡನಗರ ವಾರ್ಡ್ ನಲ್ಲಿ ಸ್ಲಂ ಸಂಸ್ಥೆ ಸೇವಾ ಸಂಘಟನೆ ವತಿಯಿಂದ ಸ್ಲಂ ಪ್ರದೇಶದಲ್ಲಿ ವಾಸಿಸುತ್ತಿರುವ ಸರ್ಕಾರಿ ಶಾಲೆಯ ನೂರಾರು ಮಕ್ಕಳಿಗೆ ಪಾದಗಳ ಸುರಕ್ಷತೆಗಾಗಿ ಶೂ (ಬೂಟ್ಸ್) ಗಳನ್ನು ವಿತರಿಸಿ ಅವರು ಮಾತನಾಡಿದರು.
                                                     

ವಿದ್ಯಾವಂತ ಸಮಾಜ, ಸಮ ಸಮಾಜ ಅಭಿವೃದ್ದಿಯಾಗಬೇಕಾದರೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಆರ್ಥಿಕವಾಗಿ ಹಿಂದುಳಿದ ಮತ್ತು ಸ್ಲಂ ಪ್ರದೇಶದಲ್ಲಿ ಉತ್ತಮ ಪ್ರತಿಭಾವಂತ ಮಕ್ಕಳು ಇದ್ದಾರೆ. ಶ್ರೀಮಂತ ಕುಟುಂಬದ ಮಕ್ಕಳಿಗೆ ಸಿಗುವ ಹೈಟೆಕ್ ಶಿಕ್ಷಣ ಸೌಲಭ್ಯಗಳು, ಬಡ ಮಕ್ಕಳಿಗೂ ಸಿಗಬೇಕು ಎಂಬ ಉದ್ದೇಶದಿಂದ ಸ್ಲಂ ಸಂಸ್ಥೆ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಶಿಕ್ಷಣ ಪಡೆಯಲು ಉಚಿತವಾಗಿ ಕಂಪ್ಯೂಟರ್ ತರಬೇತಿ ಕೇಂದ್ರ ನಡೆಸಲಾಗುತ್ತಿದೆ.

ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಹಕಾರವಾಗಲಿ ಎಂದು ಶಿಕ್ಷಣ ತಜ್ಞರಿಂದ ಉಚಿತ ಟ್ಯೂಶನ್ ಅನ್ನು ಪ್ರತಿ ವರ್ಷ ಮೂರು ತಿಂಗಳ ಕಾಲ ನಡೆಸಲಾಗುತ್ತಿದೆ.
ಪ್ರತಿಭಾವಂತ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲು ಸುಮಾರು 30ಕ್ಕೂ ಹೆಚ್ಚು ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗಿದೆ. ಸಮಸಮಾಜ, ಅಭಿವೃದ್ದಿ ಮತ್ತು ವಿದ್ಯಾವಂತ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಲಭಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಅಮರೇಶ್ (ಅಂಬರೀಶ್),ಬಿಜೆಪಿ ಮುಖಂಡರಾದ ರಾಜು, ಹೊಂಬೆಗೌಡನಗರ ವಾರ್ಡ್ ಬಿಜೆಪಿ ಅಧ್ಯಕ್ಷ ಅಜಿತ್ ರಾಜಣ್ಣ, ಹರೀಶ್, ಯುವಧ್ವನಿ ಸಂಸ್ಥೆಯ ಅಧ್ಯಕ್ಷ ಶ್ರವಣ್ ಸೂರಜ್ ಹಿರಿಯ ಸ್ವಯಂ ಸೇವಕರಾದ ಶ್ರೀನಾಥ್, ಪ್ರಭಾಕರ್ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.