ಅರಸೀಕೆರೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಎ.ಅಶೋಕ್ ಕುಮಾರ್ ರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಹಾಸನ ಜಿಲ್ಲಾ ಘಟಕ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಘಟಕ ಅಧ್ಯಕ್ಷ ಈ.ಕೃಷ್ಣೇಗೌಡ ತಿಳಿಸಿದ್ದಾರೆ.
ಅರಸೀಕೆರೆ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಅಧ್ಯಕ್ಷರಾಗಿ ಉತ್ತಮ ಸೇವೆಯನ್ನು ಸಲ್ಲಿಸಿದ ಇವರನ್ನು ಗುರುತಿಸಿ ಜಿಲ್ಲಾ ಘಟಕ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ಮಾತನಾಡಿ ರಾಜ್ಯ ಸರ್ಕಾರಿ ನೌಕರರ ಅನೇಕ ಬೇಡಿಕೆಗಳು ಇದ್ದು, ಅವುಗಳಲ್ಲಿ ಹಲವಾರು ಬೇಡಿಕೆಗಳು ಅನುಷ್ಠಾನಕ್ಕೆ ಬರದೇ ಉಳಿದಿದೆ. ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಂಘಗಳ ಪದಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸರ್ಕಾರಿ ನೌಕರರ ಪರವಾಗಿ ಹೋರಾಟ ಮಾಡಲಾಗುವುದು. ನೌಕರರ ಕುಟುಂಬ ಸದಸ್ಯರ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಲು ರಾಜ್ಯ ಮತ್ತು ಜಿಲ್ಲೆ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.
ನೌಕರರಲ್ಲಿ ಇರುವ ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿಗಾಗಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಎಲ್ಲಾ ಯಶಸ್ಸುಗಳ ಹಿಂದೆ ರಾಜ್ಯದ ಉದ್ದಗಲಕ್ಕೂ ಇರುವ ನಮ್ಮ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ಮಾರ್ಗದರ್ಶನ ಹಾಗು ಸೂಚನೆಗಳೇ ಶಕ್ತಿಯಾಗಿದೆ. ಹಾಸನ ಜಿಲ್ಲಾ ಘಟಕಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಯೋಗದೊಂದಿಗೆ ಉತ್ತಮ ಸೇವೆ ಮಾಡಲು ಅವಕಾಶ ನೀಡಿರುವುದು ಹರ್ಷವಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ವಿವಿಧ ಅಂಗ ಸಂಸ್ಥೆಗಳು, ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಈ ಸಂದರ್ಭದಲ್ಲಿ ಶುಭ ಕೋರಿದ್ದಾರೆ.