December 24, 2024

ಅರಸೀಕೆರೆ: ಅಭಿವೃದ್ಧಿ ಕೆಲಸ ಮಾಡುವಾಗ ಟೀಕೆ ಟಿಪ್ಪಣಿಗಳು ಸರ್ವೇ ಸಾಮಾನ್ಯ ಎಂದು
ರಾಜ್ಯ ಗೃಹಮಂಡಳಿ ಅಧ್ಯಕ್ಷರು ಹಾಗು ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ತಾಲ್ಲೂಕಿನ ಹಾರನಹಳ್ಳಿ ಗ್ರಾ.ಪಂ ವತಿಯಿಂದ ನಿರ್ಮಿಸಿದ 35 ವಾಣಿಜ್ಯ ಮಳಿಗೆಗಳನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.

1 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಸ್ತುತ ಅಗಲೀಕರಣವಾಗಿರುವ ರಸ್ತೆಗೆ ಇಂಟರ್ ಲಾಕ್ ನೊಂದಿಗೆ ಡಿವೈಡರ್ ನಿರ್ಮಾಣ ಮಾಡಲಾಗುತ್ತಿದೆ. ಒಳ ಚರಂಡಿ ನಿರ್ಮಾಣ ಕಾಮಗಾರಿ ಗುಣಮಟ್ಟ ಉತ್ತಮವಾಗಿದ್ದು, ಹಾರನಹಳ್ಳಿ ಗ್ರಾಮದಲ್ಲಿ ನಿರ್ಮಾಣ ಆಗುತ್ತಿರುವ ರಸ್ತೆಯು ಹೈಟೆಕ್ ಆಗುತ್ತದೆ. ಹಾರನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಉತ್ತಮ ಕೆಲಸಗಳ ಮೂಲಕ ಅಭಿವೃದ್ಧಿ ಮಾಡಿದ್ದು, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಈ ಮಳಿಗೆಗಳ ಮೂಲಕ ಆದಾಯ ಸೇರಿದಂತೆ ಸರ್ಕಾರದ ಅನುದಾನಗಳ ಹಣವು ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಿ ಮುಂದಿನ ದಿನಗಳಲ್ಲಿ ಅರ್ಥಿಕ ಸದೃಡತೆ ಈ ಗ್ರಾ.ಪಂ ಗೆ ಸಿಗಲಿದೆ.

.ಈ ಗ್ರಾಮಕ್ಕೆ ಮಿನಿ ಬಸ್ ನಿಲ್ದಾಣ ಕೂಡ ನಿರ್ಮಾಣ ಆಗಲಿದ್ದು, ಜಾವಗಲ್, ಅರಸೀಕೆರೆ, ಹಾಸನ ಮೂಲಕ ಸಂಚರಿಸುವ ಬಸ್ ಗಳು ನಿಲುಗಡೆ ಆಗಬೇಕು. ಅದರಂತೆ ಕೆ.ಎಸ್.ಆರ್.ಟಿ.ಸಿ ಇಲಾಖೆಯ ಒಬ್ಬ ಅಧಿಕಾರಿಯನ್ನು ನೇಮಿಸಲಾಗುವುದು. ಪ್ರಸ್ತುತ ಒಂದು ವಾರದಿಂದ ಮಳೆ ಚೆನ್ನಾಗಿ ಆಗುತ್ತಿದೆ. ಎತ್ತಿನ ಹೊಳೆ ಯೋಜನೆ ಮೂಲಕ 38 ಕೆರೆಗಳಿಗೆ ನೀರು ಹರಿದಾಗ ಮಾತ್ರ ನನ್ನ ರಾಜಕೀಯ ಜೀವನ ಸಾರ್ಥಕವಾಗುತ್ತದೆ. ಇಂತಹ ಒಳ್ಳೆಯ ಅಭಿವೃದ್ಧಿ ಕೆಲಸಗಳು ಮುಂದುವರೆಯಲಿ. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಕಾನೂನಾತ್ಮಕವಾಗಿ ಕೆಲಸ ಕಾರ್ಯಗಳೊಂದಿಗೆ ಅಭಿವೃದ್ಧಿ ಕೂಡ ಆಗಲಿ. ಮೂಲ ಸೌಕರ್ಯಗಳೊಂದಿಗೆ ಒಂದರೆಡು ತಿಂಗಳಲ್ಲಿ ಹಾರನಹಳ್ಳಿ ಗ್ರಾಮದ ಚಿತ್ರಣವೇ ಬದಲಾಗಲಿದೆ. ಹಾರನಹಳ್ಳಿಗೆ ಹೋಬಳಿ ಕೇಂದ್ರ ಆಗುವ ಎಲ್ಲಾ ಲಕ್ಷಣಗಳಿವೆ. ಈ ಗ್ರಾಮದ ಸುತ್ತಮುತ್ತ ಸೂಕ್ತ ಜಮೀನು‌ ನೀಡಿದಲ್ಲಿ ಆಶ್ರಯ ನಿವೇಶನಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು.

ಪಿಡಿಓ ರಾಧಮ್ಮ ಮಾತನಾಡಿ ಹಾರನಹಳ್ಳಿ ಮೂಲಕ ಹಾದು ಹೋಗಿರುವ ಹಾಸನ -ಅರಸೀಕೆರೆ ಮಾರ್ಗ ರಸ್ತೆ ತೆರವುಗೊಂಡು ಅಗಲೀಕರಣದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇದ್ದಂತಹ 15 ಮಳಿಗೆಗಳನ್ನು ತೆರೆವುಗೊಳಿಸಲಾಗಿತ್ತು. ಅಂಗಡಿಗಳು ಸೇರಿದಂತೆ ನೂತವಾಗಿ ನಿರ್ಮಾಣ ಮಾಡಿರುವ 35 ಮಳಿಗೆಗಳನ್ನು ಹಾರನಹಳ್ಳಿ ಗ್ರಾ.ಪಂ ತೆರಿಗೆ ಅನುದಾನ ದಲ್ಲಿ 5 ಲಕ್ಷ ರೂ ಮತ್ತು ಜೆಜೆಎಂ ಯೋಜನೆ ಅನುದಾನದಲ್ಲಿ 10 ಲಕ್ಷ ರೂ. ಸೇರಿದಂತೆ 15 ಲಕ್ಷ ರೂ ವೆಚ್ಚದಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಟೆಂಡರ್ ಕರೆದು ಹರಾಜು ಪ್ರಕ್ರಿಯೆಯಲ್ಲಿ ಅಂಗಡಿಗಳನ್ನು ವಿತರಿಸಲಾಗುವುದು ಎಂದರು.

ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ ಗಂಗಾಧರ್ ನಾಯ್ಕ್ ಮಾತನಾಡಿದರು.
ಸದಸ್ಯರಾದ ಯಮುನಾ ದೇವರಾಜ್, ಮಂಜುಳಾ, ಲೋಕೇಶ್, ಹಿರಿಯಣ್ಣ, ಪ್ರಕಾಶ್, ನಾಗರಾಜು, ಮುಖಂಡ ಗುರುಸಿದ್ದಪ್ಪ, ಪ್ರಭು, ಮಲ್ಲೇಶ್ ನಾಯಕ್, ಜಯಪ್ರಕಾಶ್, ಕಾರ್ಯದರ್ಶಿ ಚಂದ್ರಶೇಖರ್, ದೇವರಾಜ್, ನಾಗರಾಜು, ಮಹೇಶ್ , ತಾ.ಪಂ ಮಾಜಿ ಉಪಾಧ್ಯಕ್ಷ ಗುತ್ತಿನಕೆರೆ ಶಿವಮೂರ್ತಿ, ಧರ್ಮಶೇಖರ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

-ಆನಂದ್ ಕೌಶಿಕ್.


Leave a Reply

Your email address will not be published. Required fields are marked *