ಭಟ್ಕಳ: ದಿ.21-11-2024 ರಿಂದ 23-11-2024 ರವರೆಗೆ “ವಿಶ್ವ ಮೀನುಗಾರಿಕೆ ದಿನಾಚರಣೆ- 2024” ಹಾಗೂ ರಾಜ್ಯ ಮಟ್ಟದ “ಮತ್ಸ್ಯಮೇಳ”ವು ಭಟ್ಕಳದ ಮುರುಡೇಶ್ವರದಲ್ಲಿ ಆಯೋಜಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸುವ ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿರುವರು. “ಮತ್ಸ್ಯಮೇಳ”ವು ಮುರುಡೇಶ್ವರದ ಆರ್.ಎನ್.ಎಸ್. ಗಾಲ್ಫ್ ಕ್ಲಬ್ ರೆಸಾರ್ಟ್ ನವೆಂಬರ್ 21,2024 ರಂದು ಸಂಜೆ 4:00 ಗಂಟೆಗೆ ಉದ್ಘಾಟನೆಯಾಗಲಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ಬಂದರು ಹಾಗೂ ಒಳನಾಡು, ಜಲ ಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್.ವೈದ್ಯ ಹಾಗೂ ರಾಜ್ಯ ಸಂಪುಟ ದರ್ಜೆಯ ಎಲ್ಲಾ ಸಚಿವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕವು ಪ್ರಮುಖ ಮೀನುಗಾರಿಕಾ ರಾಜ್ಯವಾಗಿದ್ದು, 320-ಕಿಲೋಮೀಟರ್ ಕರಾವಳಿ ತೀರ ಮತ್ತು 5,813 ಕಿಲೋಮೀಟರ್ ನದಿ ಭಾಗಗಳನ್ನು ಒಳಗೊಂಡಿದೆ. ವಾರ್ಷಿಕವಾಗಿ 1 ರಿಂದ 12 ಮಿಲಿಯನ್ ಟನ್ ಮೀನು ಉತ್ಪಾದಿಸಲಾಗುತ್ತಿದೆ. 4048.99 ಕೋಟಿ ರೂಪಾಯಿ ಮೌಲ್ಯದ 2.48 ಲಕ್ಷ ಮೆಟ್ರಿಕ್ ಟನ್ ಮೀನುಗಳನ್ನು ರಫ್ತು ಮಾಡಲಾಗುತ್ತದೆ.
ಅತಿಯಾದ ಮೀನುಗಾರಿಕೆಯಿಂದ ಕ್ಷೀಣಿಸುತ್ತಿರುವ ಮೀನು ಹಿಡುವಳಿ, ಮೀನು ಮರಿಗಳನ್ನು ಹಿಡಿಯುವ ಸಣ್ಣ ಗಾತ್ರದ ಬಲೆ ಬಳಕೆ, ಅನೇಕ ಉದ್ದೇಶಿತವಲ್ಲದ ಮೀನು ಹಿಡುವಳಿ, ಮಳೆಗಾಲದ ಮೀನುಗಾರಿಕೆ, ಪರಿಸರ ಮಾಲಿನ್ಯದಿಂದ ಸಮುದ್ರ ಮೀನು ಉತ್ಪಾದನೆಯು ಕಡಿಮೆಯಾಗುತ್ತಿದ್ದು, ಸದರಿ ವಲಯದಲ್ಲಿ ಮೀನು ಉತ್ಪಾದನೆಯನ್ನು ಹೆಚ್ಚಿಸುವುದು ಒಂದು ಸವಾಲಾಗಿರುತ್ತದೆ. ಆಫ್ರಿಕನ್ ಕ್ಯಾಟ್‌ಫಿಶ್‌ನಂತಹ ವಿದೇಶಿ ಜಾತಿಗಳ ಪರಿಚಯ ಒಳನಾಡು ಮೀನುಗಾರಿಕೆಯಲ್ಲಿ ಪ್ರಮುಖ ಸಮಸ್ಯೆಗಳಾಗಿವೆ.
“ಮತ್ಸಮೇಳ-2024”
ಈ ಹಿನ್ನೆಲೆಯಲ್ಲಿ ಕರಾವಳಿ ಪಟ್ಟಣವಾದ ಮುರುಡೇಶ್ವರದಲ್ಲಿ “ಮತ್ಸ್ಯಮೇಳ-2024” ನಡೆಯುತ್ತಿದ್ದು, ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು 60 ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ಷಾರಿಸ್ಟ್ ಗಳು ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು ತಮ್ಮ ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸಲಿದ್ದಾರೆ. ಈ ಮೇಳದಲ್ಲಿ ಸುರಂಗ ಅಕ್ಕೇರಿಯಂ ಮತ್ತು ಅಲಂಕಾರಿಕ ಮೀನು ಪ್ರದರ್ಶನವು ನೂರಾರು ವಿಶಿಷ್ಟ ಮೀನು ಪ್ರಭೇದಗಳನ್ನು ಪ್ರದರ್ಶಿಸಲಾಗುತ್ತದೆ. ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು ಅಲ್ಲಿ ತಜ್ಞರು ಇತ್ತೀಚಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ಚರ್ಚೆ, ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
“ಮತ್ಸ್ಯಮೇಳ-2024” ನ ಪ್ರಮುಖ ಆಕರ್ಷಣೆಗಳು:
ಅಕ್ವೇರಿಯಂ ಗ್ಯಾಲರಿ, ಸುರಂಗ ಅಕ್ವೇರಿಯಂ, ಸರ್ಕಾರಿ ಸಂಸ್ಥೆಗಳ ಮಳಿಗೆಗಳು, ಮೀನುಗಾರಿಕೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳ ಮಳಿಗೆಗಳು, ಫೀಡ್ ಕಂಪನಿಗಳು, ಸಮುದ್ರ ಕಳೆ ಪ್ರದರ್ಶನ, ತಾಂತ್ರಿಕ ಗೋಷ್ಠಿಗಳು ಯಶಸ್ಸಿನ ಯಶೋಗಾಥೆಗಳು, ಮೀನು ಆಹಾರ ಮಳಿಗೆಗಳು, ಮನೋರಂಜನೆ ಅಲಂಕಾರಿಕ ಮೀನು ಮಾರಾಟ ನಡೆಯಲಿದೆ.
ಮೀನುಗಾರಿಕಾ ಕ್ಷೇತ್ರದ ಮಹತ್ವವನ್ನು ಗುರುತಿಸಿ ಮತ್ತು ಮೀನುಗಾರರ ನೈತಿಕ ಧೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಆದ್ದರಿಂದ ರಾಜ್ಯ, ಜಿಲ್ಲೆ, ತಾಲೂಕಿನ, ಸಮಸ್ತ ಸಾರ್ವಜನಿಕರು ಮತ್ತು ಮೀನುಗಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.
-ಲೋಕೇಶ್ ನಾಯ್ಕ್, ಭಟ್ಕಳ.