December 24, 2024

ಬೆಂಗಳೂರು: ಬಿಜಿಎಸ್ ಸಂಸ್ಥೆಯು ಭಕ್ತಿ, ಜ್ಞಾನ, ಸಂಸ್ಕೃತಿಯ ಸಂಗಮವಾಗಿದೆ‌. ಸುಮಾರು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಪ್ರತಿ ವರ್ಷ ಲಕ್ಷಾಂತರ ಮಕ್ಕಳಿಗೆ ಅಕ್ಷರ ದಾಸೋಹ ಮಾಡಿಕೊಂಡು ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಂಗೇರಿ-ಉತ್ತರಹಳ್ಳಿ ರಸ್ತೆಯಲ್ಲಿರುವ
ಬಿಜಿಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳ ಆವರಣದ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ
“ಬಿಜಿಎಸ್ 16ನೇ ಸಂಸ್ಥಾಪನಾ ದಿನಾಚರಣೆ” ಹಾಗೂ “ಬಿಜಿಎಸ್ ಉತ್ಸವ-2024” ಕಾರ್ಯಕ್ರಮದ ಎರಡನೇ ದಿನ ಪಾಲ್ಗೊಂಡು ಅವರು ಮಾತನಾಡಿದರು.

“ಆದಿ ಚುಂಚನಗಿರಿ ಮಠದ ವತಿಯಿಂದ 500 ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗಿದೆ. ಈ ಸಂಸ್ಥೆಗಳಲ್ಲಿ 1.5 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪರ್ಯಾಯವಾಗಿ ನಮ್ಮ ಮಠಮಾನ್ಯಗಳು ರಾಜ್ಯದಲ್ಲಿ ಅಕ್ಷರದಾಸೋಹ ಮಾಡಿಕೊಂಡು ಬಂದಿವೆ. ಇದಕ್ಕಿಂತ ದೊಡ್ಡ ಮಾನವೀಯ ಸೇವೆ ಮತ್ತೊಂದಿಲ್ಲ ಎಂದು ಸರ್ಕಾರದ ಪ್ರತಿನಿಧಿಯಾಗಿ ಹೇಳಬಯಸುತ್ತೇನೆ.
ಈ ಕಾರ್ಯಕ್ರಮದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಗಳನ್ನು ಹಾಗೂ ಅವರ ಮಾರ್ಗದರ್ಶನ ಸ್ಮರಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ.

ಇದು ನಮ್ಮ ಸಂಸ್ಕೃತಿ, ಇದೇ ನಮ್ಮ ದೇಶದ ಆಸ್ತಿ. ಇಂದು ಬಾಲಗಂಗಾಧರನಾಥ ಸ್ವಾಮೀಜಿಗಳ ಜಯಂತಿಯಂದು ನಿಮ್ಮೆಲ್ಲರ ಪರವಾಗಿ ನಾನು ದೀಪ ಬೆಳಗಿಸಿದ್ದೇನೆ. ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನ ಸಂಪದಂ, ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಆರೋಗ್ಯ, ಐಶ್ವರ್ಯ, ಸಂಪತ್ತು, ವಿದ್ಯೆ ಎಲ್ಲವೂ ಸಿಗಲಿ ಎಂದು ಆಶಿಸುತ್ತೇನೆ. ಶಿಕ್ಷಣ ಸಂಸ್ಥೆ ಕಾರ್ಯಕ್ರಮದಲ್ಲಿ ನಾವು ಸೇರಿದ್ದು, ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ನಾನು ಕೆಲ ಕಾಲ ಕಾರ್ಯಕ್ರಮ ನೋಡಿ ಸಂತೋಷವಾಯಿತು. ಬಿಜಿಎಸ್ ಎಂದರೆ ಕೇವಲ ವಿದ್ಯಾ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಸಾಹಿತ್ಯ, ಕಲೆ ಕ್ಷೇತ್ರಕ್ಕೆ ಆದ್ಯತೆ ನೀಡಿ ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸಲು ಸಹಕಾರ ನೀಡುತ್ತಿದೆ.
ನಾನು 2008ರಲ್ಲಿ ರಾಜ್ಯಶಾಸ್ತ್ರ ಪದವಿ ವ್ಯಾಸಂಗ ಮಾಡಿದೆ.

ಇತಿಹಾಸ ಓದುವಾಗ ಅಲೆಕ್ಸಾಡಂರ್ ಭಾರತ ವಶಪಡಿಸಿಕೊಳ್ಳಲು ಹೊರಟಾಗ ತನ್ನ ಗುರು ಅರಿಸ್ಟಾಟಲ್ ಅವರನ್ನು ಭೇಟಿ ಮಾಡುತ್ತಾನೆ. ಆಗ ಅರಿಸ್ಟಾಟಲ್ ಅಲೆಕ್ಸಾಂಡರ್ ಗೆ ಒಂದು ಮಾತು ಹೇಳುತ್ತಾರೆ. ಭಾರತದಿಂದ ಮರಳಿ ಬರುವಾಗ ಐದು ವಸ್ತು ತೆಗೆದುಕೊಂಡು ಬಾ. ರಾಮಾಯಣ, ಮಹಾಭಾರತ ಗ್ರಂಥ, ಗಂಗಾಜಲ, ಕೃಷ್ಣನ ಕೊಳಲು, ಬಾಲಗಂಗಾಧರನಾಥ ಸ್ವಾಮೀಜಿಯಂತಹ ತತ್ವಜ್ಞಾನಿ ಕರೆದುಕೊಂಡು ಬಾ. ಈ ಐದು ವಸ್ತುಗಳನ್ನು ಗೆದ್ದರೆ ಭಾರತವನ್ನೇ ಗೆದ್ದಂತೆ. ನಮ್ಮ ಸಂಸ್ಕೃತಿ ನಮ್ಮ ಮಠ ಮಾನ್ಯಗಳು.
25 ವರ್ಷಗಳ ಹಿಂದೆ ನಾನು ಸಹಕಾರ ಮಂತ್ರಿಯಾಗಿದ್ದಾಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ಯಾರೀಸ್ ದೇಶಕ್ಕೆ ಭೇಟಿ ನೀಡಿದ್ದೆ. ಆ ಕಾರ್ಯಕ್ರಮದ ದಿನ ನನ್ನ ಜನ್ಮದಿನವಾಗಿತ್ತು. ಅಂದು ವೇದಿಕೆ ಮೇಲೆ ಕರೆದು ನನ್ನ ಪರಿಚಯಿಸಿ ಕೇಕ್ ಕತ್ತರಿಸಲು ಹೇಳಿದರು. ಆ ಸಂದರ್ಭದಲ್ಲಿ ಮೇಣದ ದೀಪ ಆರಿಸಲು ಹೇಳಿದರು. ಆಗ ವ್ಯಕ್ತಿಯೊಬ್ಬ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವರು ಭಾರತೀಯರು ಅವರದ್ದು ದೀಪ ಹಚ್ಚುವ ಸಂಸ್ಕೃತಿಯೇ ಹೊರತು, ದೀಪ ಆರಿಸುವ ಸಂಸ್ಕೃತಿಯಲ್ಲ ಎಂದು ಹೇಳಿದರು.

ನೀವು ನಿಮ್ಮ ಮೂಲ ಮರೆಯಬಾರದು. ಪೋಷಕರು, ಶಾಲೆ, ಶಿಕ್ಷಕರೇ ನಿಮ್ಮ ಮೂಲ. ಅವರನ್ನು ಎಂದಿಗೂ ಮರೆಯಬಾರದು. ನಾವು ನಮ್ಮ ಮನೆಗಳನ್ನು ರಕ್ಷಿಸಿಕೊಂಡಂತೆ, ಮಠವನ್ನು ರಕ್ಷಣೆ ಮಾಡಿಕೊಳ್ಳಬೇಕು. ಬಿಜಿಎಸ್ ಸಂಸ್ಥೆ ಆಲದಮರದಂತೆ, ನಿರಂತರವಾಗಿ ಬೆಳೆದು ಜನರಿಗೆ ನೆರಳಾಗಿ ನಿಲ್ಲುತ್ತದೆ. ಬಾಲಗಂಗಾಧರನಾಥ ಸ್ವಾಮೀಜಿಗಳು ಹಾಕಿಕೊಟ್ಟಿರುವ ಅಡಿಪಾಯ ಮಹತ್ವದ್ದಾಗಿದ್ದು, ನಿರ್ಮಲಾನಂದ ಸ್ವಾಮೀಜಿಗಳು ಹಾಗೂ ಇತರೆ ಸ್ವಾಮೀಜಿಗಳು ಬಹಳ ಆಸ್ಥೆಯಿಂದ ಬೆಳೆಸಿಕೊಂಡು ಹೋಗುತ್ತಿದ್ದಾರೆ.

ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಿ ಮಾರ್ಗದರ್ಶನ ನೀಡುತ್ತಿರುವ ಈ ಸಂಸ್ಥೆ ಕೊಡುಗೆ ಅನನ್ಯ.

ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಮಠದ ವತಿಯಿಂದ ಪರಿಸರ ಉಳಿಸಲು 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಮಾಡಲಾಗಿತ್ತು. ನೀವುಗಳು ಕೂಡ 10 ಗಿಡಗಳನ್ನು ನೆಟ್ಟು ಪರಿಸರ ಉಳಿಸುವ ಕಾರ್ಯ ಮಾಡಬೇಕು. ಪರೋಪಕಾರಾರ್ಥ ವಹಂತಿ ವದ್ಯಃ | ಪರೋಪಕಾರಾರ್ಥ ದುಹಂತಿ ಗಾವಃ || ಪರೋಪಕಾರಾರ್ಥ ಫಲಂತಿ ವೃಕ್ಷಾಃ | ಪರೋಪಕಾರಾರ್ಥಮಿದಂ ಶರೀರಂ||” ಅಂದರೆ ನದಿ ಹರಿಯುವುದು, ಹಸು ಹಾಲು ನೀಡುವುದು, ಮರ ಹಣ್ಣು ನೀಡುವುದು ಬೇರೆಯವರಿಗಾಗಿ. ಅದೇ ರೀತಿ ನಮ್ಮ ಜೀವನವು ಬೇರೆಯವರ ಸಹಾಯಕ್ಕೆ ಮೀಸಲಿಡಬೇಕು.
ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕಲ್ಲನ್ನು ಚಪ್ಪಡಿಯಾಗಿ, ಜಲ್ಲಿಯಾಗಿ, ಕಂಬವಾಗಿ, ವಿಗ್ರಹವಾಗಿ ಬಳಸಬಹುದು. ನೀವು ಕೂಡ ನಿಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯಲ್ಲಿ ಸಮಾಜಕ್ಕೆ ನೆರವಾಗಬೇಕು. ಈ ಸಂಸ್ಥೆಯಲ್ಲಿ ಓದಿರುವವರೆಲ್ಲರೂ ಹಳೇ ವಿದ್ಯಾರ್ಥಿಗಳ ಸಂಘಟನೆ ಮಾಡಿಕೊಳ್ಳಬೇಕು. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ದಾನ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ
ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಬಿಜಿಎಸ್ ಮತ್ತು ಎಸ್.ಜೆ.ಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಡಾ.ಪ್ರಕಾಶನಾಥ ಸ್ವಾಮೀಜಿ, ನಿಕಟಪೂರ್ವ ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *