ಉಡುಪಿ: ತಾಲ್ಲೂಕಿನ ತೆಂಕನಿಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್ಚಿನ ಕಡೆಗಳಲ್ಲಿ ಜಲಾವೃತಗೊಂಡು ಮಳೆ ನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಕೆಳಾರ್ಕಳಬೆಟ್ಟು ಅಂಚೆ ಕಚೇರಿ ಹತ್ತಿರ ಸ್ಥಳೀಯ ಜನಪ್ರತಿನಿಧಿಗಳಾದ ಅನುಷಾ ಆಚಾರ್ಯ ಮತ್ತು ಸುರೇಶ್ ನಾಯ್ಕ್ ಎಂಬುವರಿಗೆ ಕರೆ ಮಾಡಿ ತಿಳಿಸಿದರೆ, ಗಂಭೀರವಾಗಿ ಪರಿಗಣಿಸದ ಇವರು, ಜನರಿಗೆ ತೊಂದರೆಯಾಗಿರುವ ಬಗ್ಗೆ ಮಾಹಿತಿ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸಿರುತ್ತಾರೆ. ಅಲ್ಲದೆ ಸಾರ್ವಜನಿಕರ ಕರೆಗೂ ಸ್ಪಂದನೆ ನೀಡದೆ ನಮಗೆ ಬೇರೆ ಕೆಲಸ ಕಾರ್ಯಗಳಿವೆ ಎನ್ನುವ ಹಾರಿಕೆಯ ಉತ್ತರವನ್ನು ನೀಡಿದ್ದಾರೆ. ಈ ವಿಚಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುತ್ತದೆ.
ಈ ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರೂ ನೀರು ನಿಂತು ಜನರು ಡೆಂಗ್ಯೂ ಕಾಯಿಲೆಗೆ ತುತ್ತಾಗುವ ಭಯ ಇರುವ ಕಾರಣ ಪಂಚಾಯತ್ ಅಧ್ಯಕ್ಷರಿಗೆ ಕರೆ ಮಾಡಿ ತಿಳಿಸಲಾಯಿತು. ಆಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭಾ.ಡಿ ನಾಯ್ಕ್, ಅಭಿವೃದ್ಧಿ ಅಧಿಕಾರಿ ದಯಾನಂದ್, ಗ್ರಾಮ ಆಡಳಿತಾಧಿಕಾರಿ ಪವಿತ್ರ, ಪಂಚಾಯಿತಿ ಸಿಬ್ಬಂದಿಯಾದ ಪ್ರಶಾಂತ್ ಪೂಜಾರಿ, ಗ್ರಾಮ ಸಹಾಯಕರಾದ ರತ್ನಾಕರ ಪಂಚಾಯತ್ ಸದಸ್ಯರಾದ ಪ್ರಖ್ಯಾತ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಮಂಜುನಾಥ್ ಆಚಾರ್ಯ, ಮೀನಾ ಪಿಂಟೋ ಇವರು ಸ್ಥಳಕ್ಕೆ ಭೇಟಿ ನೀಡಿದರು.
ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಯಾದ ಪ್ರಖ್ಯಾತ್ ಶೆಟ್ಟಿ ಅವರು ಸಾರ್ವಜನಿಕರಿಗೆ ಏನೇ ತೊಂದರೆಯಾದಾಗ ನಮ್ಮನ್ನು ಭೇಟಿಯಾಗಬಹುದು, ಅಥವಾ ನಮಗೆ ಕರೆ ಮಾಡಿ, ನಾವು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುತ್ತೇವೆ ಎನ್ನುವ ವಿಚಾರವನ್ನು ತಿಳಿಸಿದರು. ಇವರ ನೆರೆ ಕಾರ್ಯಚರಣೆ ಬೆಳಿಗ್ಗೆ 6:00 ಯಿಂದ ಪ್ರಾರಂಭವಾಗಿ ಮಧ್ಯಾಹ್ನದವರೆಗೂ ಉಪಹಾರ ಮಾಡದೆ ನಡೆಯಿತು. ಸಾರ್ವಜನಿಕರಿಗೆ ತೊಂದರೆಯಾದ ಮನೆ ಮನೆಗಳಿಗೆ ಹೋಗಿ ವಿಚಾರಿಸಿದ್ದು, ನೀರು ನುಗ್ಗಿ ತೊಂದರೆಯಾದ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ತುರ್ತು ಕಾರ್ಯವನ್ನು ಮಾಡುವುದಾಗಿ ಸಾರ್ವಜನಿಕರಿಗೆ ತಿಳಿಸಿದರು.
ಮಳೆ ತುಂಬಾ ಇರುವುದರಿಂದ ಸಾರ್ವಜನಿಕರು ವಿದ್ಯುತ್ ಕಂಬಗಳಾಗಲಿ, ತಂತಿಗಳಾಗಲಿ ಇರುವಲ್ಲಿ ಮುಟ್ಟಬಾರದು ಅದರ ಹತ್ತಿರ ನಿಲ್ಲುವುದು ಕೂಢ ಅಪಾಯಕಾರಿಯಾಗಿದೆ. ಅಂತಹ ಕೆಲಸಗಳನ್ನು ಮಾಡಬಾರದು. ಇದರಿಂದ ಜೀವ ಹಾನಿಯಾದ ಉದಾಹರಣೆಗಳಿವೆ. ಇದರಿಂದ ದೂರವಿರಬೇಕು ಎಂದು ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯ ಮಾಹಿತಿಯನ್ನು ತಿಳಿಸಿದರು. ಜೊತೆಗೆ ಮಳೆಯಿಂದ ಜೀವಕ್ಕೆ ಹಾನಿಯಾಗುವ ಅಪಾಯವಿದ್ದರೆ ಕೂಡಲೇ ಪಂಚಾಯಿತಿಗೆ ಸಂಪರ್ಕಿಸಬೇಕೆಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಾಧ್ಯಮಕ್ಕೆ ಹೇಳಿಕೆ ನೀಡಿದರು.
ಕೆಳಾರ್ಕಳ ಬೆಟ್ಟುವಿನ ರೆಬೆಲ್ಲೋ ಕಂಪೌಂಡ್ ಎನ್ನುವಲ್ಲಿ ನೀರು ನುಗ್ಗಿ ರಸ್ತೆಗಳು ಕೊಚ್ಚಿ ಹೋಗಿ ಮನೆಯ ಕಾಂಪೌಂಡ್ ಗಳು ಬಿದ್ದು ಹೋಗಿದ್ದು ತೋಟಗಳಿಗೆ ನೀರು ನುಗ್ಗಿ ಅನಾಹುತವಾದ ಸ್ಥಳಗಳಿಗೆ ಭೇಟಿ ನೀಡಿದರು. ಅಪಾಯದ ನೆರೆಹಾವಳಿಯ ಪರಿಸ್ಥಿತಿಯಲ್ಲಿ ಜನ ಜೀವನ ಅಸ್ತವ್ಯಸ್ತವಾದ ಪರಿಸ್ಥಿತಿಯಲ್ಲಿ ಮಳೆರಾಯನ ಆರ್ಭಟದಲ್ಲೂ ಸಾರ್ವಜನಿಕರ ಜೀವನ ಮತ್ತು ಜೀವದ ಬಗ್ಗೆ ಮುತುವರ್ಜಿ ವಹಿಸಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂತಹ ವಿಚಾರ ತಿಳಿದ ಸಾರ್ವಜನಿಕರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ್ ಅಧ್ಯಕ್ಷರಿಗೆ, ಸರ್ವ ಸದಸ್ಯರಿಗೂ, ಕಂದಾಯ ಗ್ರಾಮ ಆಡಳಿತಾಧಿಕಾರಿಗಳಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು.
-ಆರತಿ ಗಿಳಿಯಾರು, ಉಡುಪಿ.