ಉಡುಪಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬ್ರಹ್ಮಾವರ ತಾಲೂಕಿನ ಮೂಡು ಗಿಳಿಯಾರು ಗ್ರಾಮದ ನಿರೋಣಿ ಬೆಟ್ಟು, ಚಾರ್ಕುರ್ ಮನೆ, ಬನ್ನಾಡಿಯ ತೆಂಕುಮನೆ, ವಡ್ದರ್ಸೆ, ಶಿರಿಯಾರ ಈ ವ್ಯಾಪ್ತಿಯಲ್ಲಿ ದನದ ಕೊಟ್ಟಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿ ಜನರಿಗೆ, ಜನ ಜಾನುವಾರುಗಳಿಗೆ ತುಂಬಾ ತೊಂದರೆಯಾಗಿತ್ತು.
ಈ ವಿಚಾರ ತಿಳಿದು ಅಗ್ನಿಶಾಮಕಾದಳದ ಸಿಬ್ಬಂದಿಗಳೊಂದಿಗೆ ಬ್ರಹ್ಮಾವರ ತಹಶೀಲ್ದಾರರಾದ ಶ್ರೀಕಾಂತ್ ಹೆಗ್ಡೆ ಯವರು ಹಾಗೂ ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಕೋಟ ಕಂದಾಯ ಆಡಳಿತ ಅಧಿಕಾರಿ ರಾಘವೇಂದ್ರ ಹಾಗೂ ಕೋಟ ಪಿಡಿಒ ಸುರೇಶ್ ಇವರುಗಳು ಜಿಲ್ಲೆಯಲ್ಲಿ ಗಾಳಿ ಮಳೆಯ ಆರ್ಭಟ ಇದ್ದರೂ, ಅದ್ಯಾವುದನ್ನೂ ಲೆಕ್ಕಿಸದೆ ಬೆಳಿಗ್ಗೆ ಸುಮಾರು 9 ಗಂಟೆಯಿಂದ ಉಪಹಾರ ಇಲ್ಲದೆ ಮಧ್ಯಾಹ್ನ 3:00 ವರೆಗೂ ನೆರೆ ಸಂತ್ರಸ್ತರನ್ನು ಜಲಾವೃತದಲ್ಲಿ ಸಿಲುಕಿದ್ದ ಜನರು ಹಾಗೂ ಜಾನುವಾರುಗಳನ್ನು ವಿಪತ್ತಿನಿಂದ ಹೊರ ತಂದು ಜೀವ ರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದರು.
ಕೆಲವೊಂದು ಕಡೆ ನೆರೆ ನೀರಿನ ಹಾವಳಿ ಜಾಸ್ತಿಯಾದ ಜಿಲ್ಲೆಯ ಎಲ್ಲಾ ಕಡೆಯಲ್ಲೂ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿದ್ಯಾಕುಮಾರಿ ಹಾಗೂ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ರವರು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಸದಸ್ಯರಾದ ಯೋಗೇಂದ್ರ ಪೂಜಾರಿ, ಸ್ಥಳೀಯ ನಿಸರ್ಗ ಫ್ರೆಂಡ್ಸ್ ನ ಭಾರ್ಗವ, ಪವನ್, ಸದಾಶಿವ ತೆಂಕು ಮನೆ, ರಘುರಾಮ್ ತೆಂಕು ಮನೆ, ಶೇಖರ ನಿರೋಣಿ ಮನೆ, ಕರುಣಾಕರ ಆಚಾರ್ ಒಳ್ಳೆಲ್ ಮನೆ, ಯೋಜನ್, ಸೃಜನ್, ನಿಖಿಲ್, ನಟೇಶ್ ಪ್ರಥಮ್, ಸಂತೋಷ್, ರಾಕೇಶ್ ಗಿಳಿಯರ್ ಇವರೆಲ್ಲರ ಸಹಕಾರದೊಂದಿಗೆ ಜನ ಜಾನುವಾರುಗಳನ್ನು ರಕ್ಷಣೆ ಮಾಡಲಾಯಿತು.
ದನಗಳನ್ನು ಎತ್ತರದ ಪ್ರದೇಶಗಳಿಗೆ ಸಾಗಿಸಲಾಯಿತು. ಜನರಿಗೆ ಗಂಜಿ ಕೇಂದ್ರಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿರುತ್ತಾರೆ. ಆದರೆ ಜನ ಅಧಿಕಾರಿಗಳ ಮಾತನ್ನು ಕೇಳದೆ ತಮ್ಮ ಸಂಬಂಧಿಕರ ಮನೆಗಳಲ್ಲಿ ತಂಗಿರುತ್ತಾರೆ. ಈ ರೀತಿಯಾಗಿ ಕಾರ್ಯಾಚರಣೆ ಮಾಡಿ ಸಾರ್ವಜನಿಕರಿಗೆ ಸಹಕರಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ, ಬ್ರಹ್ಮಾವರ ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳಿಗೆ, ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಸದಸ್ಯರಿಗೂ ಹಾಗೂ ಸ್ಥಳೀಯ ಸಂಸ್ಥೆಯಾದ ನಿಸರ್ಗ ಫ್ರೆಂಡ್ಸ್ ರವರಿಗೂ ಸಾರ್ವಜನಿಕರು ಧನ್ಯವಾದಗಳನ್ನು ತಿಳಿಸಿದರು.
-ಆರತಿ ಗಿಳಿಯಾರ್