December 24, 2024

ಹಾಸನ: ಪ್ರಜಾಪ್ರಭುತ್ವದ ನಿರಂತರ ಚಟುವಟಿಕೆಗಳಿಗೆ ಮಾಧ್ಯಮಗಳು ಉಸಿರನ್ನು ನೀಡುವ ಕ್ಷೇತ್ರವಾಗಿದೆ. ಈ ಮೂಲಕ ಆರೋಗ್ಯ ಪೂರ್ಣ ಸಮಾಜದ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಜನಪ್ರತಿನಿಧಿಗಳನ್ನು ಎಚ್ಚರಿಸುವ ಜೊತೆಯಲ್ಲಿ ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಮಾಧ್ಯಮ ಕ್ಷೇತ್ರವು ಕಾರ್ಯನಿರ್ವಹಿಸುತ್ತಿವೆ. ಈ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಮುಂದಿನ ಒಂದು ತಿಂಗಳ ಒಳಗಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು. ನಗರದ ಎಂ.ಜಿ.ರಸ್ತೆ ಬಳಿಯ ಗಾಂಧೀ ಭವನದ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಮಾಧ್ಯಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರಿಗೆ, ಪತ್ರಿಕಾ ವೃತ್ತಿಗೆ ನಮ್ಮ ಸಂವಿಧಾನ ಪ್ರತ್ಯೇಕವಾದ ಹಕ್ಕುಗಳನ್ನು ಕೊಟ್ಟಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆರಳಲ್ಲೇ ಪತ್ರಿಕಾ ಸ್ವಾತಂತ್ರ್ಯವೂ ಇದೆ. ಹೀಗಾಗಿ ಸಂವಿಧಾನದ ರಕ್ಷಣೆಯಿಂದ ಮಾತ್ರ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಸಾಧ್ಯವಾಗಿದೆ. ಜನರ ನಿರೀಕ್ಷೆ ಮತ್ತು ಸಮಸ್ಯೆಗಳನ್ನು ಅರಿಯಲು ಸರ್ಕಾರಕ್ಕಾಗಲಿ, ವಿರೋಧ ಪಕ್ಷಕ್ಕಾಗಲಿ ಇರುವ ಬಹುಮುಖ್ಯ ಸಾಧನ ಮಾಧ್ಯಮ. ಮೊದಲೆಲ್ಲಾ ಜನರ ನಿರೀಕ್ಷೆಗಳನ್ನು ಮಾಧ್ಯಮಗಳು ಸರ್ಕಾರದ ಗಮನಕ್ಕೆ ತರುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಕಾರ್ಪೋರೇಟ್ ಶ್ರೀಮಂತರ ವೈಯುಕ್ತಿಕ ಹಿತಾಸಕ್ತಿಗಳೇ ಜನರ ಸಮಸ್ಯೆಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ.

ಯಾವುದೇ ಪತ್ರಿಕಾ ಸಂಸ್ಥೆಗಳಲ್ಲಿ ಪತ್ರಿಕೆ ಹಾಕುವವರಿಂದ ಹಿಡಿದು ವರದಿಗಾರರು, ಜಾಹಿರಾತು ಪ್ರತಿನಿಧಿಗಳು, ಸಂಪಾದಕರವರೆಗೂ ಬಹುತೇಕ ಮಂದಿ ರೈತ, ಕಾರ್ಮಿಕರ ಮಕ್ಕಳೇ ಆಗಿದ್ದಾರೆ. ಆದರೂ ರೈತ- ಕಾರ್ಮಿಕರ ಮತ್ತು ದುಡಿಯುವ ವರ್ಗಗಳ ನಿಜವಾದ ಸಮಸ್ಯೆಗಳಿಗೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಮೊದಲಿನಷ್ಟು ಪ್ರಾಶಸ್ತ್ಯ ಸಿಗುತ್ತಿಲ್ಲ. ನಾವು ಈಗ ಪತ್ರಿಕಾ ಸ್ವಾತಂತ್ರ್ಯವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದರೆ ಇದರಲ್ಲಿ ನಮ್ಮ ಪಾತ್ರ ಏನೇನೂ ಇಲ್ಲ. ನಮ್ಮ ಹಿಂದಿನವರ ಕಾಳಜಿ, ಹೋರಾಟ ಮತ್ತು ವೃತ್ತಿಪರತೆಯ ಫಲವನ್ನು ನಾವು ಈಗ ಸವಿಯುತ್ತಿದ್ದೇವೆ. ಇಂದು ಫೇಕ್ ನ್ಯೂಸ್ ಫ್ಯಾಕ್ಟರಿಗಳೇ ತಲೆ ಎತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಈ ಜವಾಬ್ದಾರಿಯನ್ನು ನಿರ್ವಹಿಸೋಣ. ಸಾಮಾಜಿಕ ತಾಣಗಳಿಂದ ಸಮಾಜಕ್ಕೆ ಆಗುತ್ತಿರುವ ಅನಾಹುತಗಳನ್ನು ತಡೆಯುವ ಶಕ್ತಿ ನಿಮಗಿದೆ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ದಿನಾಚರಣೆ ಮೂಲಕ ಪತ್ರಕರ್ತರ ಸಮೂಹ ಒಟ್ಟಾಗಿ ಸೇರುವ ಭಾಗ್ಯ ಸಿಕ್ಕಿದೆ. ಪತ್ರಕರ್ತರು ಇಂದು ಅನೇಕ ಒತ್ತಡ ಹಾಗೂ ಸವಾಲುಗಳ ನಡುವೆ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಪತ್ರಕರ್ತರ ಬಸ್ ಪಾಸ್ ಹಾಗೂ ಪತ್ರಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಆರೋಗ್ಯ ವಿಮೆ ಕಲ್ಪಿಸಿಕೊಡಬೇಕು. ಪತ್ರಕರ್ತರ ನಾನಾ ಬೇಡಿಕೆಗಳನ್ನು ಸರ್ಕಾರದ ಮಾಧ್ಯಮ ಸಲಹೆಗಾರರ ಮುಂದೆ ಇಡಲಾಗಿದೆ. ಅತೀ ಶೀಘ್ರದಲ್ಲಿ ಈ ಕೆಲಸ ಸರ್ಕಾರದ ಕಡೆಯಿಂದ ಆಗಬೇಕಾಗಿದೆ ಎಂದು ಮನವಿ ಮಾಡಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ ನಾನು ಚಿಕ್ಕ ವಯಸ್ಸಿಗೆ ಸಂಸದನಾಗಿದ್ದು, ನಿಮ್ಮೆಲ್ಲರ ಸಲಹೆ, ಮಾರ್ಗದರ್ಶನದ ಮೂಲಕ ಅಭಿವೃದ್ಧಿ ಕೆಲಸ ಮಾಡಲಾಗುವುದು. ಜನ ಸ್ನೇಹಿ ಸಂಸದನಾಗಬೇಕು ಎಂಬ ತುಡಿತವಿದ್ದು, ಅದೇ ರೀತಿ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆ ಎಂದರು.
ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ ಪತ್ರಕರ್ತರಿಗೆ ನಿವೇಶನ ನೀಡುವ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಹುಡಾದಿಂದ ಪತ್ರಕರ್ತರಿಗೆ ಮೀಸಲಾತಿ ನೀಡಿ ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿ ನಿವೇಶನ ನೀಡುವ ಕೆಲಸ ಮಾಡಲಾಗುವುದು. ಪತ್ರಕರ್ತರಿಗೆ ಅವಶ್ಯಕತೆ ಇರುವ ಬೇಡಿಕೆಗಳ ಬಗ್ಗೆ ಸದನದಲ್ಲಿ ಚರ್ಚಿಸಿ ಸರ್ಕಾರ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕರು, ವಿವಿಧ ಕ್ರೀಡೆಗಳ ಸ್ಪರ್ಧೆಯಲ್ಲಿ ವಿಜೇತರಾದ ಪತ್ರಕರ್ತರು ಸೇರಿದಂತೆ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ವಿವಿಧ ಪತ್ರಕರ್ತರಿಗೆ ಗೌರವಿಸಿ ಸನ್ಮಾನಿಸಲಾಯಿತು. ವಸತಿ ಸಚಿವ ಜಮೀರ್ ಅಹಮದ್ ಅವರ ಮಾಧ್ಯಮ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್, ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮದನ ಗೌಡ, ಬಾಲಭವನ ಅಧ್ಯಕ್ಷ ಬಿ.ಆರ್.ನಾಯ್ಡು, ತೆಂಗಿನ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ನಟರಾಜ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ, ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತರಾದ ರವಿನಾಕಲಗೂಡು, ವಾರ್ತಾಧಿಕಾರಿ ಮೀನಾಕ್ಷಮ್ಮ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್. ವೇಣುಕುಮಾರ್, ಉಪಾಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್, ಕೆ.ಎಂ. ಹರೀಶ್, ಡಿ.ಬಿ. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಕಾರ್ಯದರ್ಶಿ ಸಿ.ಬಿ. ಸಂತೋಷ್, ಪಿ.ಎ. ಶ್ರೀನಿವಾಸ್, ಖಜಾಂಚಿ ಕುಮಾರ್ ಹಾಗೂ ಸಂಘದ ಪದಾಧಿಕಾರಿಗಳು, ಕಾರ್‍ಯಕಾರಿ ಸಮಿತಿ ಸದಸ್ಯರು ಸೇರಿದಂತೆ ವಿವಿಧ ತಾಲ್ಲೂಕು ಸಂಘಗಳ ಪದಾಧಿಕಾರಿಗಳು, ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *