December 24, 2024

ಅರಸೀಕೆರೆ: ತಿಪಟೂರು ತಾಲ್ಲೂಕಿನ‌ ಕೆರೆಗೋಡಿ ರಂಗಾಪುರ ಸುಕ್ಷೇತ್ರದಲ್ಲಿ ಆ.4 ರ ಭಾನುವಾರದಂದು ಭೀಮನ‌ ಅಮವಾಸ್ಯೆಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಕ್ಷೇತ್ರಾಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಯು.ಕೆ.ಶಿವಪ್ಪ ಹೇಳಿದರು. ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸುಕ್ಷೇತ್ರ ಕೆರೆಗೋಡಿ – ರಂಗಾಪುರ ಸುಕ್ಷೇತ್ರದ ಶ್ರೀಶ್ರೀಶ್ರೀಗುರು ಪರದೇಶಿ ಕೇಂದ್ರ ಮಹಾಸ್ವಾಮಿ ರವರ ನೇತೃತ್ವದಲ್ಲಿ ಆ.4 ರ ಭಾನುವಾರದಂದು ಭೀಮನ ಅಮಾವಾಸ್ಯೆಯ ವಿಶೇಷ ಧಾರ್ಮಿಕ ಆಚರಣೆ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಏರ್ಪಡಿಸಲಾಗಿದೆ. ಪ್ರತಿ ತಿಂಗಳು ಅಮಾವಾಸ್ಯೆಯಂದು ಶ್ರೀಕ್ಷೇತ್ರದಲ್ಲಿ ಕಟ್ಟಳೆ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಆಷಾಢ ಮಾಸದ ಅಮಾವಾಸ್ಯೆಯಂದು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆಗಳನ್ನು ಏರ್ಪಡಿಸಿದೆ.

ಈ ಸಂದರ್ಭದಲ್ಲಿ ಕ್ಷೇತ್ರದ ಆರಾಧ್ಯ ದೇವತೆಗಳಾದ ಶ್ರೀಶಂಕರೇಶ್ವರ ಸ್ವಾಮಿ, ಶ್ರೀರಂಗನಾಥ ಸ್ವಾಮಿ, ಗುರುವರೇಣ್ಯರ ಗದ್ದುಗೆಗಳಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳೆಯರು ತಮ್ಮ ಕುಟುಂಬ ಮತ್ತು ಸಮಾಜ ಕಲ್ಯಾಣಕ್ಕಾಗಿ ಸಲ್ಲಿಸುವ ವಿಶೇಷ ಪೂಜಾ ಅನುಷ್ಠಾನಗಳು ಆಕರ್ಷಣೆಯಾಗಿರುತ್ತವೆ.

ಈ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತಾಧಿಗಳು ಮತ್ತು ಶ್ರೀಮಠದ ಅಭಿಮಾನಿಗಳಿಗೆ ತಿಪಟೂರಿನಿಂದ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಿಸಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಸಹಸ್ರಾರು ಭಕ್ತಾಧಿಗಳಿಗೆ ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ದಿನ ರಾತ್ರಿ 10 ಗಂಟೆಗೆ ಶ್ರೀಯವರ ವಿಶೇಷ ಪುಷ್ಪಲಂಕಾರ ಮಂಟಪದಲ್ಲಿ ಉತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಯು.ಎಸ್ ಬಸವರಾಜು ಮಾತನಾಡಿ ಕೆರೆಗೋಡು-ರಂಗಾಪುರ ಶ್ರೀಕ್ಷೇತ್ರವು ಧಾರ್ಮಿಕ ಅನುಷ್ಠಾನದೊಂದಿಗೆ ಶಿಕ್ಷಣ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಕೈಗಾರಿಕಾ ತರಬೇತಿ, ಶಾಲಾ ಕಾಲೇಜುಗಳ ಸ್ಥಾಪನೆ ಸೇರಿದಂತೆ ವಿವಿಧ ಶಿಕ್ಷಣಗಳ ಮೂಲಕ ತರಬೇತಿ ನೀಡಲಾಗಿದೆ. ಇಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶ್ರೀಕ್ಷೇತ್ರದ ಗೌರವವನ್ನು ಇಮ್ಮಡಿಗೊಳಿಸಿದ್ದಾರೆ.

ಉತ್ತರ ಕರ್ನಾಟಕ ಸೇರಿದಂತೆ ಹಾಸನ ಜಿಲ್ಲೆಯ ಅರಸೀಕೆರೆ ಅರಕಲಗೂಡು ತಾಲ್ಲೂಕಿನ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಯ ವಿದ್ಯಾರ್ಥಿ ನಿಲಯಗಳಲ್ಲಿ ಪ್ರಸ್ತುತ ಶಿಕ್ಷಣಗಳನ್ನು ಪಡೆಯುತ್ತಿದ್ದಾರೆ. ಹಳೇ ಮೈಸೂರು ಭಾಗದ ಜನತೆ ಇಂದಿಗೂ ಶ್ರೀಮಠದ ಅಭಿಮಾನಿಗಳಾಗಿದ್ದು, ಇವರೆಲ್ಲ ಸಹಕಾರದಿಂದ ಶ್ರೀಕ್ಷೇತ್ರವು ಹೆಚ್ಚಿನ ಸೇವೆ ಸಲ್ಲಿಸುತ್ತಿದೆ. ಆ. 4 ರ ಭಾನುವಾರದ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಎಲ್ಲಾ ಭಕ್ತಾಧಿಗಳು, ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಅಭಿಮಾನಿಗಳು ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಲೋಕೇಶ್, ಸಹ ಕಾರ್ಯದರ್ಶಿ ಕೆ.ಆರ್.ಶಂಕರಪ್ಪ, ಜಿಲ್ಲಾ ಅಧ್ಯಕ್ಷ ಎಸ್.ವಿಶ್ವನಾಥ್, ಅಗ್ಗುಂದ ಕುಮಾರಸ್ವಾಮಿ, ಬಂಡಿಹಳ್ಳಿ ಗಂಗಾಧರ್, ಇನ್ನಿತರರು ಉಪಸ್ಥಿತರಿದ್ದರು.

-ಆನಂದ್ ಕೌಶಿಕ್.


Leave a Reply

Your email address will not be published. Required fields are marked *