ಭಟ್ಕಳ: ಸಮಾಜದಲ್ಲಿ ವಿಶೇಷ ಚೇತನ ಶಾಲೆಗಳಿಗೆ ಸಹಾಯವನ್ನು ನೀಡಿದರೆ ದೇವಸ್ಥಾನಕ್ಕೆ ಮತ್ತು ಸಮಾಜದ ಉತ್ತಮ ಕಾರ್ಯಕ್ಕೆ ನೀಡಿದಂತೆ. ಹಾಗಾಗಿ ಉಳ್ಳವರು, ದಾನ ಮಾಡುವಂತಹ ಮನಸ್ಥಿತಿ ಉಳ್ಳವರು ಇಂಥಹ ವಿಶೇಷ ಚೇತನ ಶಾಲೆಗಳಿಗೆ ಸಹಾಯವನ್ನು ನೀಡಬೇಕು ಎಂದು ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ಭಟ್ ಹೇಳಿದರು.
ಸೆ.15 ರ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಟ್ಕಳದ ಸ್ನೇಹ ವಿಶೇಷ ಶಾಲೆ ಮತ್ತು ತರಬೇತಿ ಕೇಂದ್ರ ವಿಶೇಷ ಚೇತನ ಮಕ್ಕಳ ಶಾಲೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆ ಯವರು ನೀಡಿದ 75000/-ಸಾವಿರ ರೂ ಗಳ ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿ ಗಣೇಶ್ ನಾಯ್ಕ್ ರವರಿಂದ ಶಾಲಾ ಮುಖ್ಯಸ್ತೆ ಮಾಲತಿ ನಾಯ್ಕ್ ರವರಿಗೆ ನೀಡಿ ಅವರು ಮಾತನಾಡಿದರು.
ವಿಶೇಷ ಚೇತನ ಮಕ್ಕಳು ಮನೆಗಳಲ್ಲಿ ಪಾಲಕರ ನಿರ್ಲಕ್ಷ್ಯಕ್ಕೆ ಒಳಗಾಗಿ ಜೀವನವನ್ನು ಸಾಗಿಸುವಂತಹ ಪರಿಸ್ಥಿತಿ ಇರುತ್ತದೆ. ಅಂತಹ ಮಕ್ಕಳನ್ನು ಈ ಶಾಲೆಗೆ ಕರೆತಂದು ದಿನನಿತ್ಯ ಅವರನ್ನು ನೋಡಿಕೊಳ್ಳುವಂಥದ್ದು ಸಾಮಾನ್ಯವಾದುದಲ್ಲ. ಹಾಗೆಯೇ ಅವರಿಗೆ ಈ ಶಾಲೆಯಿಂದ ಸಾಮಾನ್ಯ ಜ್ಞಾನವನ್ನು ನೀಡಿದ್ದಾರೆ. ಇದು ಮಕ್ಕಳಿಗೆ ಇನ್ನೊಂದು ಬಾಳು ನೀಡಿದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಟ್ಕಳ ಕ್ಷೇಮಾಭಿವೃದ್ಧಿ ಪತ್ರಕರ್ತ ಸಂಘದ ಅಧ್ಯಕ್ಷ ರಾಘವೇಂದ್ರಹೆಬ್ಬಾರ್, ಕಾರ್ಯದರ್ಶಿ ಮನಮೋಹನ್ ನಾಯ್ಕ್, ಹಿರಿಯ ಪತ್ರಕರ್ತ ಗನಿ. ಈಶ್ವರ ನಾಯ್ಕ್, ಶಾಲಾ ಮುಖ್ಯಸ್ತೆ ಮಾಲತಿ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
-ಲೋಕೇಶ್ ನಾಯ್ಕ್, ಭಟ್ಕಳ.