ಸಂಜೆ ಪ್ರಭ ಬೆಂಗಳೂರು:
ಸುಮಾರು 46 ವರ್ಷಗಳಿಂದ ಯಕ್ಷಗಾನದ ವೀರ ವಾದ್ಯವೆನಿಸಿದ ಚಂಡೆಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡೆಯ ಗಂಡುಗಲಿ ಎಂದು ಖ್ಯಾತರಾದ ಕೋಟ ಶಿವಾನಂದರವರು ಕಲಾಕದಂಬ ಆರ್ಟ್ ಸೆಂಟರ್ ವತಿಯಿಂದ ನೀಡುವ ಈ ಸಾಲಿನ 2024 ರ “ಕಾಳಿಂಗ ನಾವುಡ ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಉದಯಭಾನು ಸಭಾಂಗಣದ ವೇದಿಕೆಯಲ್ಲಿ 27-10-2024 ರ ಸಂಜೆ 4 ಘಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಕಾಳಿಂಗ ನಾವಡರ ನೆನಪಿನಲ್ಲಿ ಬೆಂಗಳೂರಿನ ಸಾಂಸ್ಕೃತಿಕ ಸಂಸ್ಥೆಯಾದ ಕಲಾಕದಂಬ ಆರ್ಟ್ ಸೆಂಟರ್ ವತಿಯಿಂದ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ “ಕಾಳಿಂಗ ನಾವಡ ಪ್ರಶಸ್ತಿ” ನೀಡುತ್ತಿದೆ. ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು “ಕಾಳಿಂಗ ನಾವಡ ಪ್ರಶಸ್ತಿ” ಒಳಗೊಂಡಿರುತ್ತದೆ. ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯ ಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ ಹೆಗ್ಡೆ, ಟಿ.ಜಯಂತ್ ಕುಮಾರ್, ಮಂದಾರ್ತಿ ರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ, ಶಂಕರ ಭಾಗವತ ಯಲ್ಲಾಪುರ, ಬಿದ್ಕಲ್‍ಕಟ್ಟೆ ಕೃಷ್ಣಯ್ಯ ಆಚಾರ್ಯ ಹಾಗೂ ಸುರೇಶ್ ರಾವ್ ಬಾರ್ಕೂರ್ ಅವರು ಈಗಾಗಲೇ ಕಾಳಿಂಗ ನಾವಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9448510582/ 8310482075.