December 23, 2024

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ- ಟಿ.ಬಿ ಕ್ರಾಸ್ ನಲ್ಲಿರುವ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮವಾಗಿ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮವು ಡಿ.2ರಂದು ನಡೆಯಲಿದೆ ಎಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್.ಎಸ್.ರಾಮೇಗೌಡರವರು ತಿಳಿಸಿದರು.

ಪಟ್ಟಣದ ಮಯೂರ ಶಾಲೆಯಲ್ಲಿನ ಸಭಾ ಆವರಣದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಭೈರವೈಕ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಆಶಯದಂತೆ ಹಾಗೂ 40ರಿಂದ 50 ವರ್ಷಗಳ ಸತತ ಪ್ರಯತ್ನದಿಂದಾಗಿ ರಾಜ್ಯದಲ್ಲಿಯೇ ಮೊದಲ ಭಾರಿಗೆ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭವಾಗಲಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಭಾರತ ರಾಷ್ಟ್ರವು, ಕೃಷಿ ರಾಷ್ಟ್ರವೆಂದು ಹೆಸರಾಗಿದೆ. ಈ ನಿಟ್ಟಿನಲ್ಲಿ ‌ಆದಿಚುಂಚನಗಿರಿ ಟ್ರಸ್ಟ್ ವತಿಯಿಂದ ಕೃಷಿ ವಿಜ್ಞಾನ (ಬಿ.ಎಸ್.ಸಿ). ಕಾಲೇಜಿನಲ್ಲಿ ಪ್ರವೇಶ ಪಡೆಯಲು ರೈತರ ಮಕ್ಕಳಿಗೆ ಶೇಕಡ 50ರಷ್ಟು ಸೀಟುಗಳ ಮೀಸಲಾತಿ ಇರಿಸಲಾಗಿದೆ. 60 ಸೀಟುಗಳಲ್ಲಿ 36 ಸೀಟುಗಳನ್ನು ಸಿಇಟಿ ಮೂಲಕ ಪ್ರವೇಶಾತಿ ಮಾಡಲಾಗುವುದು. ಹಾಗೂ ಇನ್ನುಳಿದ 24 ಸೀಟುಗಳಿಗೆ ಸಂಸ್ಥೆಯ ಮ್ಯಾನೇಜ್ಮೆಂಟ್ ಕೋಟದಲ್ಲಿ ಪ್ರವೇಶಾತಿ ನೀಡಲಾಗುವುದು. ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ.50ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳು ‌ಮಾತ್ರ ಪ್ರವೇಶ ಪಡೆಯಬಹುದಾಗಿದೆ.

ಈ ಕೋರ್ಸ್ 4 ವರ್ಷಗಳ ಅವಧಿಯ 8 ಸೆಮಿಸ್ಟರ್ ಗಳ ಪದವಿ ಶಿಕ್ಷಣದ ‌ಪದ್ಧತಿಯಾಗಿರುತ್ತದೆ. ಗ್ರಾಮೀಣ ಭಾಗದ ರೈತರುಗಳ ಮಕ್ಕಳು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.

ಕೃಷಿ ವಿಜ್ಞಾನ ಕಾಲೇಜಿನ ಉದ್ಘಾಟನೆಯ ಕಾರ್ಯಕ್ರಮವು ಡಿ.2ರ ಸೋಮವಾರ ಬೆಳಗ್ಗೆ 9:00ಕ್ಕೆ ಪ್ರಾರಂಭವಾಗಲಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ ಇರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಎನ್.ಚಲುವರಾಯ ಸ್ವಾಮಿ, ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪ, ಸ್ಥಳೀಯ ಜನಪ್ರತಿನಿಧಿಗಳು, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಸುರೇಶ್ ಎಸ್.ವಿ, ಆದಿಚುಂಚನಗಿರಿಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ.ಎ.ಶೇಖರ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿಗಳು , ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಸಾರ್ವಜನಿಕರು, ರೈತರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‌ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು

ಕೃಷಿ ವಿಜ್ಞಾನ ಕಾಲೇಜು ಪ್ರಾಚಾರ್ಯರಾದ ಡಾ.ಶಿವಲಿಂಗೇಗೌಡ ಮಾತನಾಡಿ ಕೃಷಿ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ಕೆಎಎಸ್ ಮತ್ತು ಐಎಎಸ್ ಹುದ್ದೆಗಳಿಗೆ ಅನುಕೂಲವಾಗುತ್ತದೆ, ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ, ಗೊಬ್ಬರದ ಅಂಗಡಿಗಳಲ್ಲಿ ಕೃಷಿ ಪ್ರತಿನಿಧಿಗಳಾಗಿ, ಬ್ಯಾಂಕಿಂಗ್ ಸೇವೆಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬಹುದು. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಕೃಷಿ ವಿಜ್ಞಾನ ಕಾಲೇಜು ಹೊರೆತಪಡಿಸಿ, ಚನ್ನಪಟ್ಟಣದಲ್ಲಿ ಮತ್ತು ಇದೀಗ ಮಹೇಶ್ವರದಲ್ಲಿ ಮಾತ್ರ ಕೃಷಿ ವಿಜ್ಞಾನ ಕಾಲೇಜು ಸ್ಥಾಪಿತವಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೃಷಿ ವಿಜ್ಞಾನ ಕಾಲೇಜಿಗೆ ಅನುಮತಿ ನೀಡಬಾರದೆಂದು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಕೃಷಿ ಸಚಿವರ ಸಹಕಾರ ‌ ಹಾಗೂ ಮಠದ ಪೂಜ್ಯರಾದ ಜಗದ್ಗುರು ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ರೈತಾಪಿ ಮಕ್ಕಳ ಅನುಕೂಲಕ್ಕಾಗಿ ಮಾಡಿರುವ ಹೋರಾಟದ ಪ್ರಯತ್ನದಿಂದಾಗಿ ಈ ಫಲ ದೊರೆತಿದೆ, ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಕೋಟಾದಡಿಯ ಸೀಟುಗಳಿಗೆ ‌ಡಿ.2ನೇ ತಾರೀಕಿನೊಳಗೆ ದಾಖಲಾಗತಕ್ಕದ್ದು ಎಂದರು.

ಈ ಸಂದರ್ಭದಲ್ಲಿ ಎಸ್.ಬಿ.ಜಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಪ್ರೊ.ಪುಟ್ಟರಂಗಪ್ಪ, ಡಾ.ರವೀಂದ್ರ ಪ್ರಾಚಾರ್ಯರು ನಾಗಮಂಗಲ ಸೇರಿದಂತೆ ಮಯೂರ ಶಾಲೆಯ ಮುಖ್ಯ ಶಿಕ್ಷಕ, ಸಹಾಶಿಕ್ಷಕ ವರ್ಗ ಸಿಬ್ಬಂದಿಗಳು ಮತ್ತು ಇತರರಿದ್ದರು.

ವರದಿ -ಸಚಿನ್ ಮಾಯಸಂದ್ರ.


Leave a Reply

Your email address will not be published. Required fields are marked *