ತುರುವೇಕೆರೆ: ಕನ್ನಡ ಯಾವ ಭಾಷೆಯನ್ನೂ ತಿರಸ್ಕರಿಸದೆ ಎಲ್ಲವನ್ನೂ ಒಪ್ಪಿಕೊಂಡು ತನ್ನ ಒಡಲಲ್ಲಿ ಧರಿಸಿರುವ ಕಾರಣ ಇವತ್ತಿಗೂ ಕನ್ನಡ ಶ್ರೇಷ್ಠ ಭಾಷೆ ಎನಿಸಿಕೊಂಡಿದೆ ಎಂದು ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ವಿಮರ್ಶಕರಾದ ಡಾ.ರವಿಕುಮಾರ್ ನೀಹ ಹೇಳಿದರು. ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಸೀಗೇಹಳ್ಳಿ ನೆಹರು ವಿದ್ಯಾಶಾಲಾ ಪ್ರೌಢ ಶಾಲೆಯ ಆವರಣದಲ್ಲಿ ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
1973ಕ್ಕಿಂತ ಹಿಂದೆ ನಾಡಿಗೆ ಮೈಸೂರು ಎಂದಿತ್ತು. ಮೈಸೂರು ಎಂದರೆ ಅತಿ ಹೆಚ್ಚು ಎಮ್ಮೆಗಳು ಇದ್ದ ನಾಡಿಗೆ ಮಹಿಷ ಮಂಡಲ ಎಂದು ಕರೆಯಲಾಗಿತ್ತು. ಸಂಸ್ಕೃತ ಕಾವ್ಯಗಳಲ್ಲಿ ಮಹಿಷ ಮಂಡಲದ ಉಲ್ಲೇಖಗಳು ಸಿಗುತ್ತವೆ. ಮೈಸೂರಿಗೆ ಹೋದರೆ ಅಲ್ಲಿ ಮಹಿಷ ಪತ್ರಿಮೆ ಇದೆ. ಆತ ರಾಕ್ಷಸನಲ್ಲ ಬದಲಿಗೆ ಆತನೊಬ್ಬ ಬೌದ್ಧ ಬಿಕ್ಕು. ಈಗಲೂ ಕೂಡ ತಮಿಳಿಗರು ನಮ್ಮನ್ನು ಯರೆಮೈನಾಡು(ಎಮ್ಮೆ) ಅಂತ ಕರೆಯುತ್ತಾರೆ.
ಸಿಂಧೂ ಬಯಲಿನ ನಾಗರಿಕತೆ ಕಾಲದಲ್ಲಿ ಕಂಡು ಬರುವ ಲಿಪಿ ಚಿಹ್ನೆಗಳು ಕೂಡ ಕನ್ನಡ, ತಮಿಳು, ಮಲೆಯಾಳಂ, ತೆಲುಗು ಮತ್ತು ತುಳುವಿನ ರೀತಿ ಹೋಲುವುದರಿಂದ ಕನ್ನಡ ಭಾಷೆಗೆ ಕೇವಲ 2 ಸಾವಿರ ಇತಿಹಾಸ ಅಲ್ಲ. ಕ್ರಿಸ್ತಪೂರ್ವ ಐದು ಸಾವಿರ ವರ್ಷಗಳ ಇತಿಹಾಸ ಕನ್ನಡಕ್ಕಿದೆ.
ಒಂದು ಕಾಲಘಟ್ಟದಲ್ಲಿ ಸಂಸ್ಕೃತ ಬರೆಯದಿದ್ದರೆ, ಮಾತನಾಡದಿದ್ದರೆ ನಿಮ್ಮ ಭಾಷೆಗೆ ಅಸ್ಥಿತ್ವವಿಲ್ಲ ಎನ್ನುವ ಕಾಲಘಟ್ಟದಲ್ಲಿ ಅದನ್ನು ವಿರೋಧಿಸಿ ದೇಸಿಯಲ್ಲಿ ಕಾವ್ಯ ಬರೆದವನು ಪಂಪ. ಸಮಕಾಲೀನ ಸಂದರ್ಭದಲ್ಲಿ ನಾವು ಭಾಷಿಕವಾಗಿ ಹೆದರಿಸುತ್ತಿರುವ ಸಂಕಟವೆಂದರೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳೆರಡನ್ನೂ ಇಟ್ಟುಕೊಂಡು ಇವುಗಳೊಂದಿಗೆ ಕನ್ನಡವನ್ನು ಕಟ್ಟುವ ಬಗೆಯನ್ನು ಚಿಂತಿಸಬೇಕಿದೆ.
ಹಿಂದಿನಿಂದ ಅನೇಕ ತಪ್ಪು ಮಾದರಿಗಳನ್ನೇ ನಮ್ಮ ತಲೆಗಳಿಗೆ ತುರುಕಿದ್ದಾರೆ. ಪ್ರೌಢ ಶಾಲಾ ಹಂತದಲ್ಲಿ ಕಲಿಸುವ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯಾಗಿ ಕಲಿಸುವ ಮಾದರಿ ಇದೆಯಲ್ಲ ಇದನ್ನು ನಾವು ಸಂವಿಧಾನದ ಭಾಗವಾಗಿ ನೋಡುವುದಾದರೆ ಹಿಂದಿಯನ್ನು ತೃತೀಯ ಭಾಷೆ ಅಂತ ಕಲಿಸಿ ಯಾಮಾರಿಸಿದ್ದಾರೆ. ಹಿಂದಿ ತೃತೀಯ ಭಾಷೆಯಲ್ಲಿ ಅದು ಕೂಡ ಕನ್ನಡ ರೀತಿ ಒಂದು ಭಾಷೆಯಷ್ಟೇ ತ್ರಿಭಾಷಾ ಸೂತ್ರದಲ್ಲೂ ಕೂಡ ಹಿಂದಿಯನ್ನು ತೃತೀಯ ಭಾಷೆ ಅಂತ ಎಲ್ಲಿಯೂ ಹೇಳೇ ಇಲ್ಲ. ಈ ತ್ರಿಭಾಷಾ ಸೂತ್ರದಿಂದಲೇ ನಮಗೆ ಅರಿವಿಲ್ಲದಂತೆ ಹಿಂದಿಭಾಷಿಕರು ರೈಲ್ವೆ, ಬ್ಯಾಂಕ್, ಕೇಂದ್ರೀಯ ಶಾಲೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಉದ್ಯೋಗದಲ್ಲಿ ಸಿಂಹಪಾಲು ಪಡೆಯುವುದರಿಂದ ಕನ್ನಡಿಗರಿಗೆ ಸಹಜವಾಗಿಯೇ ಉದ್ಯೋಗದ ಅವಕಾಶಗಳು ವಂಚಿತವಾಗುತ್ತವೆ.
ಗ್ಲೋಬಲ್ ಆಗಿರುವ ಇಂಗ್ಲೀಷ್ ಭಾಷೆಯನ್ನು ಮುಂದಿಟ್ಟುಕೊಂಡು ಕನ್ನಡ ಮರುಕಟ್ಟುವ ಕೆಲಸ ಮಾಡಬೇಕಿದೆ. ನಾವೇನಾದರೂ ಶುದ್ಧ ಕನ್ನಡಲ್ಲಿ ಮಾತನಾಡಿದರೆ ಸಂವಹನವೇ ಕೇಳುಗನ ಗ್ರಹಿಕೆಗೆ ದಕ್ಕದು. ಹಾಗಾಗಿ ಕನ್ನಡ ತನ್ನ ಭಾಷೆಯೊಂದಿಗೆ ತಮಿಳು, ತೆಲುಗು, ಪರ್ಷಿಯನ್, ಸಂಸ್ಕೃತ, ಉರ್ದು ಹೀಗೆ ಎಲ್ಲವನ್ನು ಮಿಶ್ರಣ ಮಾಡಿಕೊಂಡು ಉಸಿರಾಡುತ್ತಿದೆ.
ಉದಾಹರಣೆಗೆ “ಜೆರಾಕ್ಸ್” ಪದದ ಕನ್ನಡ ರೂಪ ಕಾಪೀ ಮಾಡುವುದು ಎಂದು. ಆದರೆ ಜೆರಾಕ್ಸ್ ಎನ್ನುವುದು ಆ ಯಂತ್ರವನ್ನು ಕಂಡು ಹಿಡಿದವನ ಹೆಸರು ಮಾತ್ರ ಹೀಗೆ ಸಾಕಷ್ಟು ಪದಗಳು ಕನ್ನಡದ ಪದದೊಳಗೆ ಸೇರಿಕೊಳ್ಳುತ್ತಾ ಕನ್ನಡ ನಿಘಂಟು ಮತ್ತು ಕನ್ನಡ ಪದ ಶಕ್ತಿ ಬಂಡಾರವನ್ನು ಶ್ರೀಮಂತವಾಗಿ ರೂಪುಗೊಳ್ಳುತ್ತಿರುವ ಕಾರಣ ಕನ್ನಡಕ್ಕೆ ಯಾವ ಆತಂಕವೂ ಇಲ್ಲ.
ಜೊತೆಗೆ ಕನ್ನಡ ಹೊಸ ಹೊಸ ಪದಕೋಶಗಳನ್ನು ರೂಪಿಸಿಕೊಳ್ಳುತ್ತಲೇ ಹೊಸ ಜಗತ್ತೊಂದು ಕಟ್ಟಿಕೊಳ್ಳಲು ಸಾದ್ಯವಾಗಿದೆ. ಉತ್ತರ ಕರ್ನಾಟಕದ ಭಾಷೆನೇ ನಿಜವಾದ ಕನ್ನಡ ಅಂತ ಭಾವಿಸುವುದು ಸೂಕ್ತವಲ್ಲ. ಏಕೆಂದರೆ ನಾವು ಪ್ರಮಾಣಿಕೃತ ಭಾಷೆಯನ್ನು ಬಳಸುತ್ತಿದ್ದೇವೆ. ನಾವು ಯಾವುದೇ ಭಾಷೆಯಿಂದ ಕನ್ನಡಕ್ಕೆ ಬಂದ ತಕ್ಷಣ ಆ ಪದವನ್ನು ಕನ್ನಡೀರಣಮಾಡಿಕೊಳ್ಳುತ್ತೇವೆ.
ಅನ್ಯ ಭಾಷಾ ಪದಗಳನ್ನು ಯಾವ ಭಾಷೆ ಸ್ವೀಕರಿಸುತ್ತದೆಯೋ ಅದು ಜೀವಂತವಾಗಿರುತ್ತದೆ. ಇಲ್ಲವಾದರೆ ಸಂಸ್ಕೃತದ ರೀತಿ ಡೆಡ್ ಲ್ಯಾಂಗ್ವೇಜ್ ಆಗಿಬಿಡುತ್ತದೆ. ಆರಂಭದಲ್ಲಿ ಈ ನಾಡಿನ ಜೈನ ಕವಿಗಳು ಕನ್ನಡ ಭಾಷೆಯನ್ನು ಅತ್ಯಂತ ಶ್ರೀಮಂತಗೊಳಿಸಿದರು. ಲಿಂಗಬೇಧವಿಲ್ಲದೆ, ಜಾತಿ ಬೇಧವಿಲ್ಲದೆ ಒಟ್ಟಿಗೆ ಕೂತು ಊಟ ಮಾಡುವ ಕಲ್ಚರ್ ಅನ್ನು ಕಲಿಸಿಕೊಟ್ಟಿದ್ದೇ 12ನೇ ಶತಮಾನದ ವಚನಕಾರರು ಮತ್ತು ಬಸವಣ್ಣ ಮಾತ್ರ.
ಈ ನೆಲದ ಚರಿತ್ರೆ ಕಟ್ಟಿಕೊಂಡದ್ದೇ ಬ್ರಿಟಿಷರು ಭಾರತಕ್ಕೆ ಬಂದ ಮೇಲೆ. ಪ್ರಾನ್ಸೀಸ್ ಬುಕಾನನ್ ಕ್ರಿ.ಶ 1800ರಲ್ಲಿ ತುಮಕೂರಿಗೆ ಬರದಿದ್ದರೆ ತುಮಕೂರಿನ ಚರಿತ್ರೆಯು ಕಣ್ಮರೆಯಾಗುತ್ತಿತ್ತು.
ಹಾಗೆಯೇ ಸ್ಟೂವರ್ಟ್ ಡಾಗ್ಸ್ 1836ರಲ್ಲಿ ತುಮಕೂರಿಗೆ ಬರುತ್ತಾನೆ. ಆಗ ತುಮಕೂರು ಚಿತ್ರದುರ್ಗ ಜಿಲ್ಲೆಗೆ ಸೇರಿರುತ್ತದೆ. ಮೊದಲ ಬಾರಿಗೆ ಡಾಬಸ್ ಪೇಟೆಯಿಂದ (ಸೋಂಪೂರ್) ಹೈ ರಸ್ತೆ ನಿರ್ಮಾಣ ಮಾಡುತ್ತಾನೆ. ಎಂದು ವಿಶ್ಷೇಷಿಸಿದರು.
ಇದೇ ವೇಳೆ ಕನ್ನಡದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳು, ಶೇ100ರಷ್ಟು ಫಲಿತಾಂಶ ತಂದ ಶಿಕ್ಷಕರು ನೆಹರು ಶಾಲೆಯ ಶಿಕ್ಷಕ ಶಿವಾನಂದ್ ಎಸ್.ಮಳಲಿಯವರಿಗೆ ಭಾಷಾ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಇ.ಒ ಎನ್.ಸೋಮಶೇಖರ್, ಪರೀಕ್ಷಾ ನೋಡಲ್ ಅಧಿಕಾರಿ ಸಿದ್ದಪ್ಪ, ದೊಡ್ಡಾಘಟ್ಟ ಚಂದ್ರೇಶ್, ಸಂಘದ ಅಧ್ಯಕ್ಷ ರಂಗಸ್ವಾಮಿ ಎಚ್.ಎಂ, ಸಂಘದ ಪದಾಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.