December 24, 2024

ಸಂಜೆ ಪ್ರಭ ಬೆಂಗಳೂರು: ಯಾವುದೇ ಕಾರ್ಯಕ್ರಮವನ್ನು ಆಚರಿಸುವಾಗ ಅರ್ಥಪೂರ್ಣವಾಗಿರಬೇಕು, ಹೃದಯದ ಅಂತರಾಳದಿಂದ ಬರಬೇಕು ಅಂತಹ ಕಾರ್ಯಕ್ರಮವು ನಿತ್ಯೋತ್ಸವ ವಾಗಿರುತ್ತದೆ. ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕರ್ನಾಟಕ ರಾಜ್ಯೋತ್ಸವವನ್ನು ನಿತ್ಯೋತ್ಸವವನ್ನಾಗಿ ಮಾಡಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು. ಮೈಸೂರು ರಸ್ತೆಯ ರಾಜರಾಜೇಶ್ವರಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವದ “ಐಸಿರಿ ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯೋತ್ಸವ ಈ ನೆಲದ ಅಸ್ಮಿತೆಯ ಆಚರಣೆ. 3000ಕ್ಕೂ ಹೆಚ್ಚು ಭಾಷೆಗಳನ್ನು ಒಳಗೊಂಡಿರುವ ಭಾಷೆಯಲ್ಲಿ ಲಿಪಿಯ ರೂಪದಲ್ಲಿ ಇರುವ ದೇಶದ ಅಂಗೀಕೃತ 22 ಭಾಷೆಗಳಲ್ಲಿ ಕನ್ನಡವು 6ನೇ ಭಾಷೆಯಾಗಿ ಸ್ಥಾನವನ್ನು ಪಡೆದಿದೆ. ಕನ್ನಡ ನಾಡಿನ ಸಂಸ್ಕೃತಿ ಪರಂಪರೆ ಇತಿಹಾಸ 2500 ವರ್ಷಕ್ಕೂ ಹಳೆಯದಾಗಿದೆ. ನಾವು ಉಚ್ಚರಿಸುವುದನ್ನೇ ನಮ್ಮ ಲಿಪಿಯಲ್ಲಿ ಬರೆಯುತ್ತೇವೆ. ಬೇರೆ ಯಾವುದೇ ಭಾಷೆಯಲ್ಲಿ ಇರುವುದಿಲ್ಲ. ಇದೇ ನಮ್ಮ ಕನ್ನಡ ಭಾಷೆಯ ವಿಶೇಷತೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡಿಗರ ಇಚ್ಛಾಶಕ್ತಿಯ ಕೊರತೆಯಿಂದ ನಾವು ಕನ್ನಡಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಪರ ಭಾಷಿಕರನ್ನು ಅಪ್ಪಿ ಬರಮಾಡಿಕೊಳ್ಳುವ ನಾವು ಅವರಿಗೆ ಕನ್ನಡವನ್ನು ಕಲಿಸುವ ಕೆಲಸವನ್ನು ಮಾಡಬೇಕಾಗಿದೆ ಹೇಳಿದರು.

ಅಂತರಾಷ್ಟ್ರೀಯ ಜಾನಪದ ಕಲಾವಿದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ. ಶಿವಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಸಂಭ್ರಮಾಚರಣೆಯಿಂದ ಆಚರಿಸಿ ಕನ್ನಡಿಗರಿಗೆ ಅತ್ಯುತ್ತಮ ಕನ್ನಡತಿ ಹಾಗೂ ಕನ್ನಡಿಗ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಕರ್ನಾಟಕದ ಮೆರುಗನ್ನು ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಬಾಲಕೃಷ್ಣ,
ಉಪಪ್ರಾಂಶುಪಾಲ ಡಾ.ಅಮುತರಾಜ್, ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ವಿ.ಚಂದ್ರು, ಡಾ.ಸದಾಶಿವಪ್ಪ, ಡಾ.ಎಲ್.ರಂಗಯ್ಯ, ಡಾ.ರಮೇಶ್ ಸೇರಿದಂತೆ ಬೋಧಕ ಬೋಧಕೇತರ ಉಪನ್ಯಾಸಕರು, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *