ಸಂಜೆ ಪ್ರಭ ಬೆಂಗಳೂರು:
ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕ್ರೀಡಾಪಟುಗಳು ಭಾಗವಹಿಸಿ 5 ಚಿನ್ನ, 3 ಬೆಳ್ಳಿ ಸೇರಿದಂತೆ ಒಟ್ಟು 08 ಪದಕಗಳನ್ನು ಗೆಲ್ಲುವ ಮೂಲಕ 2024 ರ ಅಥ್ಲೆಟಿಕ್ಸ್ ನಲ್ಲಿ ರನ್ನರ್-ಅಪ್ ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡಿದ್ದಾರೆ.
ರಾಷ್ಟ್ರೀಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟವು (ಎಎಸ್ಆರ್ಟಿಯು) ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ ಸಹಯೋಗದಲ್ಲಿ ಡಿ. 6,7 ಮತ್ತು 8 ರಂದು ವಿಶಾಖಪಟ್ಟಣಂನಲ್ಲಿ ಆಯೋಜಿಸಿದ್ದ ಈ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ದೇಶದ 19 ರಾಜ್ಯಗಳ ರಸ್ತೆ ಸಾರಿಗೆ ನಿಗಮಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ಒಟ್ಟು 28 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಬೆಂ.ಮ.ಸಾ.ಸಂಸ್ಥೆಗೆ ಲಾಂಗ್ ಜಂಪ್, 200 ಮೀ ಓಟದ ಸ್ಪರ್ಧೆ, 400 ಮೀ ರಿಲೇ, 100 ಮೀ ರಿಲೇ ಮತ್ತು ಪುರುಷರ ಜಾವೆಲಿನ್ ಥ್ರೋ ನಲ್ಲಿ ಚಿನ್ನದ ಪದಕ ಹಾಗೂ ಮಹಿಳೆಯರ ಜಾವೆಲಿನ್ ಥ್ರೋ, 400 ಮೀ ಓಟದ ಸ್ಪರ್ಧೆ, 100 ಮೀ ರಿಲೇ ನಲ್ಲಿ ಬೆಳ್ಳಿ ಪದಕ ಗೆದ್ದಿರುತ್ತಾರೆ.
ಭಾನುವಾರ ಜರುಗಿದ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ, ಆಂಧ್ರಪ್ರದೇಶದ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಎಚ್ ದ್ವಾರಕಾ ತಿರುಮಲ ರಾವ್, (ಭಾ.ಪೋ.ಸೇ), ಎಪಿಎಸ್ಆರ್ಟಿಸಿ ಅಧ್ಯಕ್ಷ ಕೆ.ನಾರಾಯಣ, ಕಾಂತಿಲಾಲ್ ದಂಡೆ, (ಭಾ.ಆ.ಸೇ). ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ ಹಾಗೂ ಟಿ.ಸೂರ್ಯ ಕಿರಣ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ಹಾಜರಿದ್ದರು.