ಭಟ್ಕಳ: ಕಳೆದ ಮೂರು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ರಾಧಾಕೃಷ್ಣ ಭಟ್ ರವರನ್ನು ಅಖಿಲ ಹವ್ಯಕ ಮಹಾಸಭಾದ ವತಿಯಿಂದ ಡಿ.8ರಂದು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳ ಸುತ್ತಮುತ್ತಲಿನ ಹವ್ಯಕರಿಗಾಗಿ ಏರ್ಪಡಿಸಲಾಗಿದ್ದ ಪ್ರತಿಬಿಂಬ-ಸನ್ಮಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
1989 ರಿಂದ ಭಟ್ಕಳದಲ್ಲಿ ಪತ್ರಕರ್ತರಾಗಿ, ಸಮಾಜ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು 1993ರಲ್ಲಿ ಭಟ್ಕಳ ತಾಲೂಕಾ ಪತ್ರಕರ್ತರ ಸಂಘವನ್ನು ಸ್ಥಾಪಿಸಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೆ ಹಾಗೂ ಸಮಾಜದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ. 2018 ರಿಂದ 2022ರ ವರೆಗೆ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಕೋವಿಡ್ ಸಮಯದಲ್ಲಿ ಜಿಲ್ಲೆಯ ಪತ್ರಕರ್ತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಲ್ಲದೇ ವಿವಿಧ ಸಂದರ್ಭದಲ್ಲಿ ಸಮಾಜದಲ್ಲಿ ಅಗತ್ಯವಿದ್ದವರಿಗೆ ಆರೋಗ್ಯದ ಕಿಟ್‌ಗಳನ್ನು ಕೊಡಿಸಿದ್ದನ್ನು ಸ್ಮರಿಸಬಹುದು.
ತಮ್ಮ ಸೇವಾವಧಿಯಲ್ಲಿ ನಿರಂತರವಾಗಿ ಸಮಾಜದ ಕೆಳವರ್ಗದವರ ಪರವಾಗಿ, ನ್ಯಾಯಯುತ, ಸತ್ಯನಿಷ್ಟ ವರದಿ, ಅಭಿವೃದ್ಧಿ ಪರ ಸದಾ ತಮ್ಮ ಚಿಂತನೆಗಳನ್ನು ಹರಿಬಿಡುತ್ತಾ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಸಮಾಜದ ವಿವಿಧ ಸಂಘಟನೆಗಳು ಹಲವಾರು ಸಂದರ್ಭಗಳಲ್ಲಿ ಸನ್ಮಾನಿಸಿದ್ದು, 2023ರಲ್ಲಿ ದಾವಣಗೆರೆಯಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
2018ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಸಾಂಘಿಕ ಪ್ರಶಸ್ತಿ ನೀಡಲಾಗಿದ್ದು, 2016ರಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಪ್ರತಿಷ್ಠಿತ ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಗೂ ಕೂಡಾ ಭಾಜನರಾಗಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಜಿಲ್ಲಾ ಪತ್ರಿಕಾ ಮಂಡಳಿಯಿಂದ 2005ರಲ್ಲಿ ಹಳಿಯಾಳದಲ್ಲಿ ಜಿಲ್ಲಾ ಸಮ್ಮಾನ, ಭಟ್ಕಳದ ರೋಟರಿ ಕ್ಲಬ್, ಅಂಜುಮಾನ್ ಕಾಲೇಜಿನ ಕನ್ನಡ ಸಂಘ, ಕೆ.ಎಸ್.ಆರ್.ಟಿ.ಸಿ. ಕನ್ನಡ ಸಂಘ, ಮಾನಾ ಕುಟುಂಬ, ಆನಂದಾಶ್ರಮ ವಿದ್ಯಾ ಸಂಸ್ಥೆ, ಭಟ್ಕಳದ ಶಾರದೋತ್ಸವ ಸಮಿತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
-ಲೋಕೇಶ ನಾಯ್ಜ್, ಭಟ್ಕಳ.