December 23, 2024

ತುರುವೇಕೆರೆ: ಅಧಿಕಾರಿಗಳೇ ತಾರತಮ್ಯ ಮಾಡಬೇಡಿ, ಸಾಮಾಜಿಕವಾಗಿ ಸಮಾನ ನ್ಯಾಯ ನೀಡಿ ಎಂದು ಚಿಮ್ಮನಹಳ್ಳಿ ಮಜರೆ ಕುರುಬರಹಳ್ಳಿ ಗ್ರಾಮದ ಕೆ.ಆರ್.ರಘು ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ, ಉದ್ದೇಶಿಸಿ ಮಾತನಾಡಿದ ಅವರು ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮ ಪಂಚಾಯತ್ ಡಿಮ್ಯಾಂಡ್ ರಿಜಿಸ್ಟರ್ ಸ್ವತ್ತಿನ ಸಂಖ್ಯೆ 234ರ ಪೈಕಿ,95-1,96-2,122,144ಕ್ಕೆ ಸಂಬಂಧಿಸಿದಂತೆ ನಮ್ಮ ಸ್ವತ್ತುಗಳಿರುವುದು ದಾಖಲಾಗಿದ್ದು, ಅದರಲ್ಲಿ ನಂ-144ರ ಸಂಬಂಧ 80X100 ಅಡಿಗಳ ಜಾಗದಲ್ಲಿ ಸುಮಾರು 25 ರಿಂದ 30 ವರ್ಷಗಳಿಂದ ಅನುಭವದಲಿರುವ ಸದರಿ ಜಾಗದಲ್ಲಿ 25X60 ಅಡಿಗಳುಳ್ಳ ಜಾಗದಲ್ಲಿ ಕಾಯಿ ತುಂಬುವ ಶೆಡ್ ಅನ್ನು ನಿರ್ಮಿಸಿಕೊಂಡಿದ್ದೇನೆ.

ಹೀಗಿರುವಾಗ ನಮ್ಮ ಗ್ರಾಮದ ಕೆಲವು ಖಾಸಗಿ ವ್ಯಕ್ತಿಗಳು, ನನ್ನ ಏಳಿಗೆಯನ್ನು ಸಹಿಸದೆ ಉದ್ದೇಶಪೂರಕವಾಗಿ ಪಂಚಾಯಿತಿ ಗ್ರಾಮ ಠಾಣಾ ಜಾಗದಲ್ಲಿ ನಾನು ಅಕ್ರಮವಾಗಿ ಶೆಡನ್ನು ನಿರ್ಮಿಸಿಕೊಂಡಿದ್ದೇನೆ ಎಂದು ದೂರನ್ನು ನೀಡಿದ್ದಾರೆ. ಈ ಸಂಬಂಧ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ತಾಲೂಕು ಪಂಚಾಯಿತಿ ಇಒ.ರವರು ಕಾಯಿ ಶೆಡ್ ನಿರ್ಮಾಣ ಕುರಿತು ಸಂಬಂಧಪಟ್ಟ ದಾಖಲಾತಿ ಒದಗಿಸಿ ಅಥವಾ ತೆರವುಗೊಳಿಸುವಂತೆ ನೋಟಿಸ್ ನೀಡಿರುವುದು ಸತ್ಯವಾಗಿದೆ.

ನಾನು ಕೂಡ ನೋಟಿಸಿಗೆ ಸಂಬಂಧಿಸಿದಂತೆ ಈಗಾಗಲೇ ತುರುವೇಕೆರೆ ಮಾನ್ಯ ಘನ ಸಿವಿಲ್ ನ್ಯಾಯಾಲಯದಲ್ಲಿ ಒ.ಎಸ್. ಸಂಖ್ಯೆ 247/2024ರ ಸಿವಿಲ್ ಪ್ರಕರಣವನ್ನು ದಾಖಲಿಸಿದ್ದೇನೆ. ಸದರಿ ಪ್ರಕರಣವು ವಿಚಾರಣಾ ಹಂತದಲ್ಲಿ ಇರುತ್ತದೆ. ಈಗಿರುವಾಗ ಸದರಿ ವಿವಾದಿತ ಜಾಗವು ನ್ಯಾಯಾಲಯದ ವಿಚಾರಣಾಂತದಲ್ಲಿರುವಾಗಲೇ ತೆರವುಗೊಳಿಸುವಂತೆ ನೋಟಿಸ್ ನೀಡುತ್ತಿರುವುದು ಸಂಬಂಧಪಟ್ಟ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಕಾಯಿ ಶೆಡ್ ತೆರವಿಗೆ ಮುಂದಾಗಿರುವುದು ಎಂದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಳೆದ ತಿಂಗಳು ನಾನೇ ಸ್ವತಃ ತಹಶೀಲ್ದಾರ್ ಅವರಿಗೆ ಗ್ರಾಮ ಠಾಣಾ ಜಾಗವನ್ನು ಗುರುತಿಸಿ ಕೊಡುವಂತೆ ಅರ್ಜಿಯನ್ನು ನೀಡಿದೆ. ಅರ್ಜಿಯಂತೆ ಕಳೆದ ವಾರ ಸರ್ಕಾರಿ ಭೂಮಾಪಕರು ಸದರಿ ಗ್ರಾಮದ ಗ್ರಾಮ ಠಾಣಾ ಜಾಗವನ್ನು ಸರ್ವೆ ಮಾಡಿ, ಸುಮಾರು 25ಕ್ಕೂ ಹೆಚ್ಚು ಮಂದಿ ಗ್ರಾಮ ಠಾಣಾ ‌ಜಾಗವನ್ನು ಒತ್ತುವರಿ ಮಾಡಿರುವುದನ್ನು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಒತ್ತುವರಿ ಮಾಡಿರುವ ಎಲ್ಲರನ್ನೂ ಬಿಟ್ಟು ನನ್ನ ಕುಟುಂಬವು ಅನುಭವದಲ್ಲಿರುವ ಜಾಗಕ್ಕೆ ನೋಟಿಸ್ ನೀಡಿ ತೆರವು ಮಾಡುವಂತೆ ತಿಳಿಸುತ್ತಿರುವುದು ಸಮಾಜಸವಲ್ಲ. ಅಕ್ರಮವಾಗಿ ಒತ್ತುವರಿ ಮಾಡಿರುವ ಪ್ರತಿಯೊಬ್ಬರಿಗೂ ನೋಟಿಸ್ ನೀಡಿ ತೆರವು ಮಾಡುವಂತೆ ಆಗ್ರಹಿಸಿದರು. ಅಲ್ಲದೇ ನ್ಯಾಯಾಲಯದ ಅಂತಿಮ ತೀರ್ಮಾನದ ಆದೇಶ ಆಗುವವರೆಗೂ ಅಧಿಕಾರಿಗಳು ತೆರವು ಮಾಡಬಾರದು ಅಥವಾ ತೆರವು ಮಾಡಲೇಬೇಕಾದರೆ ಸರ್ಕಾರಿ ಸರ್ವೇಯರ್ ವರದಿಯಂತೆ ಒತ್ತುವರಿದಾರರ ಜಾಗವನ್ನು ಸಹ ತೆರವು ಮಾಡಿಸಿ ನನಗೂ ಸಮಾನ ನ್ಯಾಯವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.

ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಮತ್ತು ದೇವಸ್ಥಾನದ ಧರ್ಮ ಕಾರ್ಯಗಳಲ್ಲಿ, ಗ್ರಾಮಕ್ಕೆ ನೀರಿನ ಅನುಕೂಲ ಸಂಬಂಧಿಸಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇನೆ. ನಾನು ಗ್ರಾಮ ಪಂಚಾಯತಿ ಸದಸ್ಯನ ಅವಧಿಯಲ್ಲಿ ಯಾವುದೇ ಲೋಪ ಆಗದಂತೆ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿದ್ದೇನೆ. ನನಗೆ ಈ ರೀತಿ ಅನ್ಯಾಯ ಮಾಡಬಾರದು. ನನಗೆ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ನಾನು ಮತ್ತು ನನ್ನ ಕುಟುಂಬ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಪ್ರಸನ್ನ ಕುಮಾರ್, ಹಿರಿಯ ಮುಖಂಡರಾದ ದೊಡ್ಡಗೊರಾಘಟ್ಟ ಸಿದ್ದರಾಮಣ್ಣ ಸೇರಿದಂತೆ ಮುಂತಾದವರಿದ್ದರು.

-ಸಚಿನ್ ಮಾಯಸಂದ್ರ.


Leave a Reply

Your email address will not be published. Required fields are marked *