December 24, 2024

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯದ ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬಿ.ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯ ಸಹಯೋಗದೊಂದಿಗೆ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಬಾಬು ಮಹೇಂದ್ರ ಪ್ರಸಾದ್ ರವರ ನಿರ್ದೇಶನದಂತೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್‍ ರವರ ನೇತೃತ್ವದಲ್ಲಿ ಪ್ರೌಢಶಾಲಾ ಮಕ್ಕಳ ನೆರವಿನಿಂದ ಜನ- ಜಾಗೃತಿ-ಜಾಥಾ ದೊಂದಿಗೆ ಲಾರ್ವ ಸಮೀಕ್ಷೆ ಮತ್ತು ನಿರ್ಮೂಲನ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಮಾದರಿ ಹಾಗೂ ವಿಶಿಷ್ಟ ಕಾರ್ಯಾಚರಣೆಯಲ್ಲಿ ಸುಮಾರು 60 ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ತಲಾ 20 ಮನೆಗಳಂತೆ ಗುಣಾತ್ಮಕವಾಗಿ ಸುಮಾರು 1200‌ ಕ್ಕೂ ಹೆಚ್ಚು ಮನೆಗಳಿಗೆ ಆಶ್ರಿತ ರೋಗವಾಹಕ ರೋಗಗಳ ಕುರಿತ ಕರಪತ್ರಗಳನ್ನು ಹಂಚಿ, ಜನತೆಗೆ ಆರೋಗ್ಯ ಶಿಕ್ಷಣ ನೀಡುವುದರೊಂದಿಗೆ “ಲಾರ್ವ ಸಮೀಕ್ಷೆ” ಮತ್ತು ನಿರ್ಮೂಲನ ಜಾಗೃತಿ ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಶೈಲ್ ಕನ್ನಾಳ್ ರವರು ಡೆಂಗ್ಯೂ, ಚಿಕನ್ ಗುನ್ಯಾ ಕುರಿತಾದ ಆರೋಗ್ಯ ಶಿಕ್ಷಣವನ್ನು ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಂಜುನಾಥ, ಕಿರಣ್, ಶರತ್, ಶಿವಣ್ಣ ಸೇರಿದಂತೆ ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳ ಲಾರ್ವ ಸಮೀಕ್ಷೆ ಮತ್ತು ನಿರ್ಮೂಲನ ತಂಡದ ಕಾರ್ಯವೈಖರಿಯ ಮೇಲ್ವಿಚಾರಣೆಯನ್ನು ಮಾಡಿದರು.


Leave a Reply

Your email address will not be published. Required fields are marked *