ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ಜಂಕ್ಷನ್ ಅನ್ನು ಅಧಿಕೃತವಾಗಿ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಎಂದು ಕರೆಯಲಾಗುತ್ತದೆ. ಈ ರೈಲ್ವೆ ನಿಲ್ದಾಣದ ಮುಖ್ಯರಸ್ತೆಯಲ್ಲಿ ಇಂದು ಬೆಳಿಗ್ಗೆಯಿಂದ ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ರೈಲ್ವೇ ನಿಲ್ದಾಣಕ್ಕೆ ಹೋಗುವವರು, ಶಾಲಾಕಾಲೇಜಿಗೆ ಹೋಗುವವರು ಮೂಗು, ಬಾಯಿ ಮುಚ್ಚಿಕೊಂಡು ಹೋಗುತ್ತಿದ್ದಾರೆ. ವಾಹನಗಳು ಜೋರಾಗಿ ಬರುವಾಗ ಮೈಮೇಲೆ ಚರಂಡಿ ನೀರು ಹಾರುವುದೆಂಬ ಭಯದಲ್ಲಿಯೂ, ಚರಂಡಿ ನೀರಿನಲ್ಲಿ ಕಾಲಿಡುತ್ತೇವೆಯೋ ಎಂಬ ಭಯದಿಂದ ನಡೆದಾಡುತ್ತಿದ್ದಾರೆ.
ಹುಬ್ಬಳ್ಳಿ ರೈಲು ನಿಲ್ದಾಣವು ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಅನ್ನು ಹೊಂದಿದೆ ಮತ್ತು ಇದು ಕರ್ನಾಟಕ ರಾಜ್ಯದ ಬೆಂಗಳೂರು ನಗರದ ನಂತರ ಅತ್ಯಂತ ಜನನಿಬಿಡ ನಿಲ್ದಾಣವೆಂದು ಪರಿಗಣಿಸಲಾಗಿದೆ. ಶ್ರೀಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲು ನಿಲ್ದಾಣವು ಹುಬ್ಬಳ್ಳಿಯಲ್ಲಿರುವ ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ಲೈನ್ ವಿಭಾಗದ ಅಡಿಯಲ್ಲಿ ಬರುತ್ತದೆ. ಈ ನಗರವು ಭಾರತೀಯ ರೈಲ್ವೆಗೆ ಅತ್ಯಗತ್ಯ ನಗರಗಳಲ್ಲಿ ಒಂದಾಗಿದೆ. ಏಕೆಂದರೆ ನೈಋತ್ಯ ರೈಲ್ವೆ ವಲಯವು ವಿಭಾಗದೊಂದಿಗೆ ಇಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಹೊಸ ಮತ್ತು ಸೊಬಗಿನ ಕಟ್ಟಡವು ಎಲ್ಲಾ ಕಡೆಯಿಂದ ಮೆಚ್ಚುಗೆಯನ್ನು ಸೆಳೆಯುತ್ತಿದೆ.
ಇಂತಹ ಮುಖ್ಯರಸ್ತೆಯಲ್ಲಿ ಚರಂಡಿಯ ನೀರು ಹರಿಯುತ್ತಿರುವುದು ನಾಚಿಕಗೇಡಿನ ಸಂಗತಿ ಎಂದು ಸಾರ್ವಜನಿಕರು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
-ಸಚಿನ್ ಮಾಯಸಂದ್ರ.