ಉಡುಪಿ: ಸುಮಾರು 32 ವರ್ಷಗಳಿಂದ ದುರ್ಮಾಂಸ ಗಡ್ಡೆಯಿಂದ ಬಳಲುತ್ತಿದ್ದ ಮಹಿಳೆಗೆ ಶಸ್ತ್ರ ಚಿಕಿತ್ಸೆಯ ಮೂಲಕ ಉಡುಪಿಯ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞರು ಸುಮಾರು 8 ಕೆ.ಜಿ. ದುರ್ಮಾಂಸವನ್ನು ಯಶಸ್ವಿಯಾಗಿ ಹೊರ ತೆಗೆದರು.
ಕಾರ್ಕಳದ ನಿವಾಸಿಯಾದ ಶ್ರೀಮತಿ ಪುಪ್ಪಾ, 71 ವರ್ಷ ಪ್ರಾಯದ ಮಹಿಳೆ. ಇವರು ಭುಜದ ಭಾಗದ ದುರ್ಮಾಂಸ ಗಡ್ಡೆಯಿಂದ ಸುಮಾರು 32 ವರ್ಷಗಳಿಂದ ಬಳಲುತ್ತಿದ್ದು, ಅಜ್ಜರಕಾಡುನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
ದಿನಾಂಕ 26-06-2024 ರಂದು ಇವರಿಗೆ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸ ತಜ್ಞರಾಗಿರುವ ಡಾ.ಸುಜಿತ್ ರವರು ಶಸ್ತ್ರಚಿಕಿತ್ಸಾ ತಂಡದೊಂದಿಗೆ ಸುಮಾರು 3 ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಿ 8 ಕೆ.ಜಿ ದುರ್ಮಾಂಸ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಜನರಲ್ ಸರ್ಜನ್ ಆಗಿರುವ ಡಾ.ಸುಜಿತ್ ಇವರ ನೇತೃತ್ವದಲ್ಲಿ ಅರವಳಿಕೆ ತಜ್ಞರಾದ ಡಾ.ಉಮೇಶ್ ಉಪಾಧ್ಯಾಯ ಹಾಗೂ ಡಾ.ವಿಶ್ವನಾಥ್ ಶೆಟ್ಟಿ ಹಾಗೂ ನುರಿತ ಶುಶ್ರುಷಕ ಅಧಿಕಾರಿಯವರ, ಸಹಯೋಗದೊಂದಿಗೆ ಈ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಹಾಗೆಯೇ ರೋಗಿಯು ಈಗ ಜಿಲ್ಲಾಸ್ಪತ್ರೆಯ ಒಳರೋಗಿ ವಿಭಾಗದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ವಿಶೇಷ ಕಾಳಜಿಯೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿರುವುದು ಶ್ಲಾಘನೀಯ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಅಶೋಕ್ ಇಡೀ ತಂಡವನ್ನು ಶ್ಲಾಘಿಸಿದರು.