December 24, 2024

ಉಡುಪಿ: ಮಾತು ಕಡಿಮೆ‌ ಮಾಡಿ, ಕೃತಿಯ ಮೂಲಕವಾಗಿ ಜನರ ನಡುವೆ ಗುರುತಿಸಿಕೊಳ್ಳುವಲ್ಲಿ ರೋಟರಿ ಸಂಸ್ಥೆ ಹಾಗೂ ಕಸಾಪ ಪ್ರಯತ್ನ ಶೀಲವಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಸಿಎ ದೇವ್ ಆನಂದ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಮತ್ತು ಕಾಪು ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ “ಪೊಲಿಪು ನಮಸ್ತೇ ಹೋಂ ಸ್ಟೇ” ರೆಸಾರ್ಟ್‌ ನಲ್ಲಿ ಜರಗಿದ ಮನೆಯೇ ಗ್ರಂಥಾಲಯದ ನಲವತ್ತೈದನೇ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನರಲ್ಲಿ ವಿಷಯ ಸಂಗ್ರಹಣೆ, ಪುಸ್ತಕ ಓದುವ ಹವ್ಯಾಸದೊಂದಿಗೆ ಜ್ಞಾನವೃದ್ಧಿಗೆ ಪೂರಕವಾಗಿ ಸ್ಪಂದಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದ ಸಂಚಾಲಕ ಸಾಹಿತಿ ಡಾ.ವಿರೂಪಾಕ್ಷ ದೇವರಮನೆ ಮಾತನಾಡಿ, ಜನರಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವಲ್ಲಿ “ಮನೆಯೇ ಗ್ರಂಥಾಲಯ” ಕಾರ್ಯಕ್ರಮ ಸಹಕಾರಿಯಾಗಲಿದೆ. ಸಾಹಿತ್ಯ ಪ್ರೀತಿಯನ್ನು ಎಲ್ಲೆಡೆಗೆ ಪಸರಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಸಾಹಿತ್ಯ ಅಭಿರುಚಿ, ಆರೋಗ್ಯ ಮಾಹಿತಿ, ಒತ್ತಡ ನಿವಾರಣೆ, ಪೌರಾಣಿಕ, ಇತಿಹಾಸ ವಿಚಾರಗಳನ್ನೊಳಗೊಂಡ ವಿವಿಧ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ.ಹೆಚ್.ಪಿ ಮಾತನಾಡಿ “ಮನೆಯೇ ಗ್ರಂಥಾಲಯ” ಸರಣಿಯ 45 ನೇ ಕಾರ್ಯಕ್ರಮ ಇದಾಗಿದ್ದು, ಮನೆಗಳು ಮಾತ್ರವಲ್ಲದೇ, ಸಾರ್ವಜನಿಕ ಪ್ರದೇಶಗಳು, ಬಸ್ ತಂಗುದಾಣ, ರೆಸಾರ್ಟ್, ಅಂಗಡಿಗಳಿಗೂ ವಿಸ್ತರಿಸಲಾಗುತ್ತಿದೆ ಎಂದರು. ಕಾಪು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ‌ ಮರಾಠೆ ಮಾತನಾಡಿ, ಮೊಬೈಲ್ ಬದಿಗಿಟ್ಟು, ಪುಸ್ತಕ ಪ್ರೇಮವನ್ನು ಹೆಚ್ಚಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಸಾಹಿತ್ಯದ ಕೆಲಸ ಮಾಡುತ್ತಿರುವ ಕಸಾಪದ ಮುಖ್ಯ ಗುರಿಯಾಗಿರುವ ಮಾತೃಭಾಷೆಯನ್ನು ಬೆಳೆಸುವ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಮೂಲಕವಾಗಿ ಅಂತರಾಷ್ಟ್ರೀಯ ಸಂಸ್ಥೆಯೂ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಮಣಿಪಾಲ ರೋಟರಿ ಕ್ಲಬ್ ನ‌ ಉಪಾಧ್ಯಕ್ಷೆ ಶಶಿಕಲಾ ರಾಜವರ್ಮ, ರೇಖಾ ದೇವ್ ಆನಂದ್, ಪೊಲಿಪು ಸರಕಾರಿ ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ರೇಷ್ಮಾ, “ನಮಸ್ತೇ ಹೋಂ ಸ್ಟೇ” ರೆಸಾರ್ಟ್ ನ ಪಾಲುದಾರ ವಿನೋದ್ ಕುಮಾರ್, ಉಡುಪಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ರಂಜನಿ ವಸಂತ್, ಸಂಚಾಲಕ ರಾಘವೇಂದ್ರ ಪ್ರಭು, ಪೂರ್ಣಿಮಾ ಜನಾರ್ದನ್ ಮುಂತಾದವರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *