ಬೆಂಗಳೂರು: ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ 1008 ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ “ಶ್ರೀರಾಘವೇಂದ್ರ ಸ್ವಾಮೀಜಿಗಳ 353″ನೇ
ಆರಾಧನೆಯ ಪೂರ್ವಭಾವಿಯಾಗಿ ಸ್ವಯಂಸೇವಕರ ಸಭೆಯು ನಡೆಯಿತು.
ವೇದಘೋಷ, ಕೊಳಲುವಾದನ, ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಆರ್.ಕೆ. ವಾದೀಂದ್ರಾಚಾರ್ಯರು ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯ ಬಗ್ಗೆ ಪ್ರಸ್ತಾಪಿಸಿ, ಆ.18 ರಂದು ಸಂಜೆ 6-30ಕ್ಕೆ ಉಡುಪಿಯ ಕಾಣಿಯೂರು ಮಠದ ಪರಮಪೂಜ್ಯ 1008 ಶ್ರೀಶ್ರೀಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು “ಉದ್ಘಾಟನೆ” ಮಾಡಲಿದ್ದಾರೆ. ತದನಂತರ ಸುಮಾರು ವರ್ಷಗಳಿಂದ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ಭಕ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು ಶ್ರೀಮಠದ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ತಿಳಿದು ಸಂತೋಷ ವ್ಯಕ್ತಪಡಿಸಿದರು ಎಂದು ನಂದಕಿಶೋರ್ ಆಚಾರ್ಯರು ಹೇಳಿದರು.
ಶ್ರೀರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಸಪ್ತರಾತ್ರೋತ್ಸವ ಉತ್ಸವದ ಅಂಗವಾಗಿ ದಿನಾಂಕ 18-08-2024 ರಿಂದ 24-082024 ವರೆಗೆ ರಾಯರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ, ಭಕ್ತರಿಗೆ ಅನ್ನಸಂತರ್ಪಣೆ, ಉತ್ಸವಗಳು, ಪ್ರವಚನ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀಮತಿ ಮೇಘ ಶಿವಕುಮಾರ್ (ಹರಿದಾಸವಾಣಿ), ವಿದ್ವಾನ್ ಪ್ರಾದೇಶಾಚಾರ್ಯ (ಹರಿದಾಸ ಮಂಜರಿ), ಬೆಂಗಳೂರು ಸಹೋದರರಾದ ವಿದ್ವಾನ್ ಹರಿಹರನ್-ಅಶೋಕ್ (ಹರಿನಾಮ ಘೋಷ), ವಿದ್ವಾನ್ ಜಯತೀರ್ಥ ಮೇವುಂಡಿ (ಹರಿನಾಮ ಸಂಕೀರ್ತನೆ), ವಿದ್ವಾನ್ ಶೇಷಗಿರಿದಾಸ್ ರಾಯಚೂರು (ದಾಸರ ಪದಗಳ ಗಾಯನ), ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ (ಭರತನಾಟ್ಯ), ವಿದ್ವಾನ್ ಜಗನ್ನಾಥಾಚಾರ್ಯ ರಾಯಚೂರು ಇವರಿಂದ ಪ್ರವಚನ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಶ್ರೀರಾಘವೇಂದ್ರ ಸ್ವಾಮಿಗಳವರ 353ನೇ “ಆರಾಧನಾ” ಮಹಾರಥೋತ್ಸವವು ಭಕ್ತಾದಿಗಳ ಸಹಕಾರದೊಂದಿಗೆ ಅತ್ಯಂತ ಸಂಭ್ರಮ ಸಡಗರ ವಿಜೃಂಭಣೆಯಿಂದ ನೆರವೇರಿಸಲು ಉದ್ದೇಶಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀಗುರುರಾಯರ ಸನ್ನಿಧಿಗೆ ಆಗಮಿಸುವ ಭಕ್ತರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರು ತಿಳಿಸಿದರು. ಸ್ವಯಂಸೇವಕರ ಕಾರ್ಯಕ್ರಮದಲ್ಲಿ ಶ್ರೀಮಠದ ಸಿಬ್ಬಂದಿಗಳು ಹಾಗೂ ಮಧುರನಾಥ್, ಡಾ.ಶ್ರೀಧರ್, ಸುರೇಶ್, ವಿಜಯ್ ಕುಮಾರ್, ಶ್ರೀನಾಥ್, ಇಂಜಿನಿಯರ್ ಶ್ರೀಧರ್, ಜಯಂತಿ ರಾಘವೇಂದ್ರ, ಉಷಾ ಮೋಹನ್, ಎ.ಸಂತೋಷ್, ರಾಜೇಶ್ ಕುಲಕರ್ಣಿ, ಇನ್ನೂ ಮುಂತಾದ ನೂರಾರು ಸ್ವಯಂ ಸೇವಕರು ಭಾಗವಹಿಸಿ ಶ್ರೀಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.