ಪಾವಗಡ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಶ್ರೀಶ್ರೀಶ್ರೀ ಡಾ.ಹನುಮಂತನಾಥ ಮಹಾಸ್ವಾಮೀಜಿಯವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿದೆ.
ತಾಲ್ಲೂಕಿನ ದವಡಬೆಟ್ಟ ಎಂಬ ಕುಗ್ರಾಮದಲ್ಲಿ ಪೂಜಾರ್ ನಾಗಪ್ಪ – ರಾಮಕ್ಕ ದಂಪತಿಗಳಿಗೆ ಜನಿಸಿದ ಹನುಮಂತ, ಬಾಲ್ಯದಲ್ಲೇ “ನಾನು ಮುಂದೆ ಸನ್ಯಾಸಿಯಾಗುತ್ತೇನೆ” ಎಂದು ಹೇಳುತ್ತಾ ವರ್ಷಕ್ಕೊಮ್ಮೆ ಮನೆದೇವರಿಗೆ ಮುಡಿ ಕೊಟ್ಟಾಗ, ಬೋಳು ತಲೆಗೆ ಕೆಂಪು ವಸ್ತ್ರವನ್ನು ಸುತ್ತಿಕೊಂಡು, ಕೈಯಲ್ಲೊಂದು ಕೋಲು ಹಿಡಿದುಕೊಂಡು “ನಾನು ಶಂಕರಾಚಾರ್ಯ” ಎಂದು ಹೇಳುತ್ತಾ ಈರುಳ್ಳಿ, ಬೆಳ್ಳುಳ್ಳಿ ಸೇವಿಸುವುದನ್ನು ತ್ಯಜಿಸಿ, ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ, ದೇವಿ ಆರಾಧನೆಯಲ್ಲಿ ಮೈಮರೆಯುತ್ತಾ, ಜೊತೆಗಾರರಿಂದ ಹುಚ್ಚ, ತಿಕ್ಕಲ ಎಂದು ಅಣಕಿಸಿಕೊಳ್ಳುತ್ತಾ ಬೆಳೆದ ಬಾಲಕ.
ಕಿತ್ತು ತಿನ್ನುವ ಬಡತನವನ್ನು ಮೀರಿ, ಆದಿಚುಂಚನಗಿರಿಯ ಸಂಸ್ಕೃತ ಪಾಠಶಾಲೆಗೆ ಸೇರಿ, ಚುಂಚನಗಿರಿಯಲ್ಲಿ ತಳವೂರಿ, “ಸಂಸಾರ ನಿಸ್ಸಾರ, ಸನ್ಯಾಸ ವಿಕಾಸ” ಎಂಬ ಸಿದ್ಧಾಂತದ ಬೆನ್ನೇರಿ, ಆಧ್ಯಾತ್ಮಿಕತೆಯ ರಥವೇರಿ, ಸನ್ಯಾಸತ್ವವ ಸ್ವೀಕರಿಸಿದ ಯುವಕ. ದಾರಿ ಯಾವುದಯ್ಯ ಬೆಳಕಿನರಮನೆಗೆ? ಎಂದು ಅರಸಿ, ಶ್ರೀವಡ್ಡಗೆರೆ ವೀರನಾಗಮ್ಮನ ಕೃಪಾಶೀರ್ವಾದ ಬಯಸಿ, ದಾನಿ ದೇವರಾಜಯ್ಯನವರ ಆಹ್ವಾನ ಸ್ವೀಕರಿಸಿ, ಮಠ ಪರಂಪರೆಯ ಆದರ್ಶ ಪಾಲಿಸಿ, ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಎಲೇ ರಾಂಪುರದಲ್ಲಿ ಶ್ರೀಕುಂಚಿಟಿಗರ ಮಹಾ ಸಂಸ್ಥಾನ ಮಠ ಸ್ಥಾಪಿಸಿ, ಎಲ್ಲಾ ಸಮುದಾಯದ ಮಕ್ಕಳನ್ನು ಪೋಷಿಸಿ, ಮಠವನ್ನು ಅಭಿವೃದ್ಧಿಪಡಿಸಿ, ಸಮಾಜ ಸೇವೆಗೆ ಜೀವನವನ್ನೇ ಮುಡುಪಾಗಿಸಿದ ಕಾಯಕ ಯೋಗಿ.
ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ.ಹನುಮಂತನಾಥ ಮಹಾಸ್ವಾಮಿಗಳು, ಇದೀಗ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಿರುತ್ತಾರೆ. ಅವರಿಗೆ ಮಠದ ಸದ್ಭಕ್ತರ ಪರವಾಗಿ ಹಾಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸೋಣ. ನಾಡಿಗೆ ಅವರ ಸೇವೆ ಇನ್ನಷ್ಟು ದೊರಕಲಿ ಎಂದು ಆಶಿಸೋಣ. ಹಾಗೆಯೇ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ನಾಮ ನಿರ್ದೇಶಿತ ಸದಸ್ಯರನ್ನಾಗಿ ಪರಮಪೂಜ್ಯರನ್ನು ಆಯ್ಕೆ ಮಾಡಿದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರಿಗೆ ಮಠದ ಭಕ್ತರ ಪರವಾಗಿ ಧನ್ಯವಾದಗಳನ್ನು ಅರ್ಪಿಸೋಣ.
-ಮಣ್ಣೆ ಮೋಹನ್.