ತುರುವೇಕೆರೆ: ಮಕ್ಕಳೇ ತಮ್ಮ ಮುಂದಿನ ಜೀವನದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ರಾಮಕೃಷ್ಣ ಮಠ ಮಾದಿಹಳ್ಳಿಯ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಮಂಗಳನಂದನಾಥನಂದಜೀ ಮಹಾರಾಜ್ ರವರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ತಾಲೂಕಿನ ಮಾದಿಹಳ್ಳಿ ಗ್ರಾಮದ ರಾಮಕೃಷ್ಣ ಮಠ ಬದರಿಕಾಶ್ರಾಮ ವಿದ್ಯಾ ಶಾಲೆಯಲ್ಲಿ ಗುರುವಾರ ಇನ್ಫೋಸಿಸ್ ಪ್ರತಿಷ್ಠಾನಾ ವತಿಯಿಂದ ನಡೆದ 2024- 25 ನೇ ಸಾಲಿನ ಸುಮಾರು 60 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇನ್ಫೋಸಿಸ್ ಎಂಬ ಕೊಡುಗೈದಾನಿ ಎಂದೆ ಹೆಸರಾದ ಸಂಸ್ಥೆಯು, ರಾಷ್ಟ್ರ ವ್ಯಾಪ್ತಿಯಲ್ಲಿ ಹಲವಾರು ಕ್ಷೇತ್ರಗಳಿಗೆ ಸಮಾಜ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ.
ತಮ್ಮ ಸಂಸ್ಥೆಯ ವತಿಯಿಂದ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ, ಹೆಚ್ಚಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲ ಮತ್ತು ಶಿಕ್ಷಣದ ಉತ್ತೇಜನಕ್ಕಾಗಿ ನೆರವಾಗಬೇಕೆಂದು ಮನವಿ ಮಾಡಿದರು. ಹಾಗೆಯೇ ನಮ್ಮ ಮಠದ ಮತ್ತು ವಿದ್ಯಾರ್ಥಿ, ಪೋಷಕರ ಪರವಾಗಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಮಕ್ಕಳೇ ನಿಮಗಾಗಿ ಸಹಾಯ ಮಾಡುತ್ತಿರುವ ಇಂತಹ ಸಂಸ್ಥೆಗಳ ಸಹಾಯವನ್ನು ಪಡೆದ ನೀವು ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ತಾವು ಸಹ ಸಹಾಯದ ಮನೋಭಾವವನ್ನು ಬೆಳೆಸಿಕೊಂಡು ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ ಇಂತಹ ಧರ್ಮಾರ್ಥ ಸಂಸ್ಥೆಗಳ ಆದರ್ಶವನ್ನು ಪಾಲಿಸಬೇಕು ಎಂದು ಆಶೀರ್ವಚನ ನೀಡುವ ಮೂಲಕ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.
ತಾಲೂಕಿನ ಗ್ರೇಡ್ 2 ತಹಶೀಲ್ದಾರ್ ಶ್ರೀಮತಿ ಸುಮತಿ ಮತ್ತು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸಿದ್ದಪ್ಪ ವಾಲೀಕಾರ್ ರವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ಗಳನ್ನು ವಿತರಿಸಿ, ಮಕ್ಕಳ ಸುರಕ್ಷತೆ, ಸಮಯ ಪ್ರಜ್ಞೆ, ಮುಂದಿನ ಶಿಕ್ಷಣ ಭವಿಷ್ಯ ಕುರಿತು ಹಲವಾರು ಉಪಯುಕ್ತ ಮಾಹಿತಿಗಳ ಸಲಹೆ ನೀಡಿದರು.
ಪೋಷಕ ಹಾಗೂ ತಾಲೂಕು ಪತ್ರಕರ್ತರ ಸಂಘದ ಖಜಾಂಚಿಯಾದ ಸಚಿನ್ ಮಾಯಸಂದ್ರ ಮಾತನಾಡಿ, ಮಠದಲ್ಲಿನ ಸುಂದರ ಪರಿಸರ, ಮಕ್ಕಳ ಕಾಳಜಿ, ಶಿಕ್ಷಕರಿಂದ ಉತ್ತಮವಾಗಿ ದೊರೆಯುತ್ತಿರುವ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತಿರುವ ರಾಮಕೃಷ್ಣ ಮಠದ ಆಡಳಿತಕ್ಕೆ ಹಾಗೂ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಗೆ ಪೋಷಕರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ವೇಳೆ ನ.28ರಂದು ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರಿಗೆ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು, ಅತಿಥಿಗಳು ಹುತಾತ್ಮರಿಗೆ ವಿಶೇಷವಾಗಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಸ್ವಾಮಿ ಉತ್ತಾರಣಾನಂದಾಜೀ ಮಹಾರಾಜ್ ಹಾಗೂ ಶಾಲಾ ಆಡಳಿತ ಮಂಡಳಿ, ಸಹ ಶಿಕ್ಷಕ ವರ್ಗ, ಸಿಬ್ಬಂದಿಗಳು, ತಾಲ್ಲೂಕು ಕಚೇರಿಯ ಶಿರಸ್ತೇದಾರ್ ಅಂಬುಜಾಕ್ಷಿ, ಸಿಬ್ಬಂದಿಗಳಾದ ವತ್ಸಲ, ಹರಿ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ರವಿ ಎಂ.ಎಸ್. ಕಾರ್ಯಕ್ರಮವನ್ನು ಸ್ವಾಗತಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ಹೇಮಂತ್ ಮತ್ತು ಜಯಶ್ರೀ ವಿದ್ಯಾರ್ಥಿ ಭಾಷಣಗಳನ್ನಾಡಿದರು, ಶಿಕ್ಷಕರಾದ ಶ್ರೀಮತಿ ಮೇಘ ಟಿ.ಎಂ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
-ಸಚಿನ್ ಮಾಯಸಂದ್ರ.