December 24, 2024

ತುರುವೇಕೆರೆ: ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ “ನಮ್ಮ ನೀರು-ನಮ್ಮ ಹಕ್ಕು” ಶೀರ್ಷಿಕೆಯಡಿಯಲ್ಲಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್.ಡಿ.ಎ ಮಿತ್ರ ಪಕ್ಷಗಳು ಹಾಗೂ ಜಿಲ್ಲೆಯ ಮಠಾಧೀಶರುಗಳ ನೇತೃತ್ವದಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಪ್ರವಾಸಿಮಂದಿರದಲ್ಲಿ ಎನ್ ಡಿ ಎ ಮಿತ್ರ ಪಕ್ಷಗಳ ಜಂಟಿ ಸುದ್ದಿಘೋಷ್ಠಿ ನಡೆಸಿ ಶಾಸಕ ಎಂ.ಟಿ ಕೃಷ್ಣಪ್ಪ ಮಾತನಾಡಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿ ಮಾಡಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ “ನಮ್ಮ ನೀರು-ನಮ್ಮ ಹಕ್ಕು” ಶೀರ್ಷಿಕೆಯಡಿಯಲ್ಲಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್.ಡಿ.ಎ ಮಿತ್ರ ಪಕ್ಷಗಳು ಹಾಗೂ ಜಿಲ್ಲೆಯ ಮಠಾಧೀಶರುಗಳ ನೇತೃತ್ವದಲ್ಲಿ ದಿ. 07-12-2024ನೇ ಶನಿವಾರ ಮತ್ತು 08-12-2024, ಭಾನುವಾರ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಅದರಂತೆ ದಿನಾಂಕ 07-12-2024ನೇ ಶನಿವಾರ ಬೆಳಿಗ್ಗೆ 10:30ಕ್ಕೆ ಸಾಗರನಹಳ್ಳಿ ಗೇಟ್ (ಹೇಮಾವತಿ ಚಾನಲ್, ರಾಷ್ಟ್ರೀಯ ಹೆದ್ದಾರಿ 206 ಬಿ.ಹೆಚ್. ರಸ್ತೆ) ಗುಬ್ಬಿ ತಾಲ್ಲೂಕಿನಿಂದ ಪ್ರಾರಂಭವಾಗಲಿರುವ ಪಾದಯಾತ್ರೆ ನಿಟ್ಟೂರು ಮಾರ್ಗವಾಗಿ ಬಂದು ಗುಬ್ಬಿ ಬಸ್ ನಿಲ್ದಾಣ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ಮಾಡಲಾಗುವುದು. ನಂತರ ರಾಷ್ಟ್ರೀಯ ಹೆದ್ದಾರಿ 206 ಮುಖಾಂತರ ಕಳ್ಳಿಪಾಳ್ಯ ಗೇಟ್ ಬಳಿ ಇರುವ ಓಂ ಪ್ಯಾಲೇಸ್ ಭವನ ತಲುಪಿ ರಾತ್ರಿ ವಾಸ್ತವ್ಯ ಮಾಡಲಾಗುವುದು.

ಮರುದಿನ ದಿನಾಂಕ 08-12-2024ನೇ ಭಾನುವಾರ ಬೆಳಿಗ್ಗೆ 9 ಗಂಟೆಗೆ ಎರಡನೇ ದಿನದ ಪಾದಯಾತ್ರೆ ಪ್ರಾರಂಭವಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಆವರಣಕ್ಕೆ ತಲುಪಿ ಕಛೇರಿ ಮುಂಭಾಗದಲ್ಲಿ ಅನಿರ್ಧಿಷ್ಠ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕರಾದ ಮಸಾಲ ಜಯರಾಮ್ ಮಾತನಾಡಿ ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಈ ಯೋಜನೆಗೆ ನಮ್ಮ ವಿರೋಧವಿದ್ದು ಹಾಗೇನಾದರೂ ನೀರನ್ನು ತೆಗೆದುಕೊಂಡು ಹೋಗಬೇಕಾದರೆ ರೈತರ ಹೆಣಗಳ ಮೇಲೆ ತೆಗೆದುಕೊಂಡು ಹೋಗಲಿ

ಯಡಿಯೂರಪ್ಪನವರ ಅವಧಿಯಲ್ಲಿ 1500 ಕೋಟಿ ರೂಪಾಯಿಗಳ ಅನುದಾನವನ್ನು ನಾಲೆಯ ಅಗಲೀಕರಣಕ್ಕೆ ನೀಡಿದ್ದರು. ನಾಲೆಯಲ್ಲಿ 800 ಕ್ಯೂಸೆಕ್ಸ್ ಹರಿಯುವ ಜಾಗದಲ್ಲಿ 1800 ಕ್ಯೂಸೆಕ್ಸ್ ನೀರು ಹರಿಯುವಂತೆ ಮಾಡಲಾಗಿದೆ.

ಮಾಗಡಿ ಚನ್ನಪಟ್ಟಣ ಭಾಗಗಳಿಗೆ ಕುಡಿಯುವ ನೀರನ್ನು ಕೊಡಲು ನಮ್ಮ ಅಬ್ಯಂತರವಿಲ್ಲ. ತೆರೆದ ನಾಲೆಯಲ್ಲಿ ನೀರನ್ನು ತೆಗೆದುಕೊಂಡು ಹೋಗಲಿ ಅದನ್ನು ಬಿಟ್ಟು ಹೆಚ್ಚು ವ್ಯಾಸವನ್ನು ಹೊಂದಿರುವ ಕೊಳವೆಗಳ ಮುಖಾಂತರ ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿದೆ.

ನೈಸರ್ಗಿಕವಾಗಿ ನೀರು ಹರಿಸಿ ತೆಗೆದುಕೊಂಡು ಕುಣಿಗಲ್ ಗೆ ನೀರು ಕೊಡಲು ನಮ್ಮ ವಿರೋಧವಿಲ್ಲ‌. ಕುಣಿಗಲ್ ತಾಲ್ಲೂಕಿಗೆ ಕುಡಿಯಲು ಮತ್ತು ವ್ಯವಸಾಯಕ್ಕೆ ನೀರಿನ ಕೊರತೆ ಇಲ್ಲ.

ಯಾಕೆ? ಈ ಸರ್ಕಾರ ಹಠಕ್ಕೆ ಬಿದ್ದಿದೆ ಗೊತ್ತಿಲ್ಲ. ನಾವು ರಕ್ತ ಕೊಟ್ಟೆವು ಕೊಳವೆ ಮೂಲಕ ನೀರು ಕೊಡೆವು. ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ. ಮತ್ತು ಜೆಡಿಎಸ್. (ಎನ್.ಡಿ.ಎ), ಕಾರ್ಯಕರ್ತರು ಹಾಗೂ ಪಕ್ಷಾತೀತವಾಗಿ ರೈತ ಬಾಂಧವರು, ಚುನಾಯಿತ ಪ್ರತಿನಿಧಿಗಳು, ಕೃಷಿ ಕಾರ್ಮಿಕರು, ರೈತಪರ ಸಂಘಟನೆಗಳ ಪ್ರತಿನಿಧಿಗಳು, ದಲಿತ ಸಂಘಟನಾ ಪ್ರತಿನಿಧಿಗಳು, ವಕೀಲರ ಸಂಘ, ವರ್ತಕ ಸಂಘಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಮಸ್ತ ನಾಗರೀಕ ಬಂಧುಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಮಾಡಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಕೆ.ವಿ.ಮೃತ್ಯುಂಜಯ, ವಿಜಯೇಂದ್ರ ಮಾವಿನಕೆರೆ,
ಯೋಗೀಶ್ ವೆಂಕಟಾಪುರ, ಕಾಳಂಜಿಹಳ್ಳಿ ಸೋಮಶೇಖರ್, ಡಿ.ಎಂಸುರೇಶ್, ತ್ಯಾಗರಾಜ್, ನಾಗೇಂದ್ರ ಗೋಣೀತುಮಕೂರು, ಮಂಜಣ್ಣ ಮಾವಿನಕೆರೆ, ಪ್ರಕಾಶ್ ಡಿ.ಎಂ, ಸತೀಶ್ ಮಾವಿನಕೆರೆ, ಚೆಲುವರಾಜ್ ಹೊಡಕೆಘಟ್ಟ, ರಂಜಿತ,ರಾಘು, ಸುರೇಶ್, ಸೋಮಣ್ಣ ಸೇರಿದಂತೆ ಇತರರು ಇದ್ದರು.


Leave a Reply

Your email address will not be published. Required fields are marked *