ಭಟ್ಕಳ: ತಾಲ್ಲೂಕಿನ ಪ್ರಸಿದ್ದ ಜಾತ್ರೆ ಮಾರಿಜಾತ್ರೆಯು ಬುಧವಾರ ಬೆಳಿಗ್ಗೆ ದೇವಿಯ ಮರದ ಮೂರ್ತಿಯನ್ನು ವಿಶ್ವಕರ್ಮ ಮನೆಯವರಿಂದ ಮೆರವಣಿಗೆಯ ಮೂಲಕ ತಂದು ಗುಡಿಯಲ್ಲಿ 5:30 ಗಂಟೆಗೆ ಪ್ರತಿಷ್ಠಾಪನೆ ಮಾಡುವುದರ ಮುಖಾಂತರ ಮಾರಿ ಜಾತ್ರೆಗೆ ಚಾಲನೆ ನೀಡಲಾಯಿತು.
ದೇವಸ್ಥಾನದ ಆಡಳಿತ ಮಂಡಳಿಯಿಂದ ಪ್ರಥಮ ಪೂಜೆಯನ್ನು ನೆರವೇರಿಸಿದ ನಂತರ ಇತರ ಭಕ್ತರಿಗೆ ಪೂಜೆ ಪುರಸ್ಕಾರಕ್ಕೆ ಹಾಗೂ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಅತಿಯಾದ ಮಳೆಯ ನಡುವೆಯೂ ಮಾರಿಗುಡಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ಬಂದು ದೇವಿಗೆ ಹೂವಿನ ಪೂಜೆ, ಹಣ್ಣುಕಾಯಿ ಸೇವೆ, ಹೂವಿನ ಟೋಪಿ, ಬಣ್ಣ ಸೇವೆ, ನೀಡುವುದರ ಮೂಲಕ ದೇವಿಗೆ ಹರಕೆ ತೀರಿಸಿದರು.
ಪ್ರತಿವರ್ಷದಂತೆ ಅನಾಧಿಕಾಲದಿಂದಲೂ ಬುಧವಾರದಂದು ದೂರದ ಗ್ರಾಮಾಂತರ ಪ್ರದೇಶದವರು, ಗುರುವಾರದಂದು ಸ್ಥಳೀಯ ಭಕ್ತರು ಮಾರಿ ಹಬ್ಬ ಆಚರಿಸುವುದು ಪದ್ಧತಿ.
ಗುರುವಾರ ಸಂಜೆ 4.00 ಗಂಟೆಗೆ ಮಾರಿ ದೇವಿಯ ಮೂರ್ತಿಯನ್ನು ಸಹಸ್ರಾರು ಭಕ್ತರು ಮೆರವಣಿಗೆಯ ಮೂಲಕ ಹೊತ್ತು ಕೊಂಡು 5 ಕಿ.ಮೀ. ದೂರದ ಜಾಲಿಕೋಡಿಯ ಸಮುದ್ರದಲ್ಲಿ ವಿಸರ್ಜಿಸಿ ಮಾರಿ ಜಾತ್ರೆ ಸಂಪನ್ನ ಗೊಳ್ಳಲಿದೆ.ಬುಧವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಂಕಾಳ್ ಎಸ್.ವೈದ್ಯ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದ ಅವರು ದೇವಿಯ ಅನುಗ್ರಹದಿಂದ ಎಲ್ಲರಿಗೂ ಸುಖ,ಶಾಂತಿ, ನೆಮ್ಮದಿ, ದೊರೆಯಲಿ. ಹಾಗೆಯೇ ಮಳೆ, ಗಾಳಿಯಿಂದ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಅನೇಕ ಅವಘಡಗಳು ಸಂಭವಿಸಿವೆ. ಇನ್ನು ಮುಂದೆ ಯಾವುದೇ ಅವಘಡಗಳು ಆಗದಂತೆ ಎಲ್ಲರಿಗೂ ದೇವಿ ಮಾರಿಕಾಂಬೆ ರಕ್ಷಣೆ ನೀಡಲಿ ಎಂದು ಪ್ರಾರ್ಥಿಸಿದರು.
ಮಾರಿಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸುವ್ಯವಸ್ಥೆಗೆ ಕಾಪಾಡಲು ಭಟ್ಕಳ ಹಾಗೂ ಗ್ರಾಮೀಣ ಠಾಣಾ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಈರಾ ನಾಯ್ಕ್, ದೀಪಕ್ ನಾಯ್ಕ್, ವೆಂಕಟೇಶ್ ನಾಯ್ಕ್, ಮಂಜಪ್ಪ ನಾಯ್ಕ್, ಸುಧಾಕರ್ ನಾಯ್ಕ್, ಸುರೇಶ ನಾಯ್ಕ್, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
-ಲೋಕೇಶ್ ನಾಯ್ಕ್, ಭಟ್ಕಳ.